ನಂಗೆ ವಿಷ ಕೊಟ್ಟು ಬಿಡಿ. ಜೈಲು ನರಕ ಸಹಿಸಲು ಆಗ್ತಿಲ್ಲ. ಸುಮ್ನೆ ಹೀಗೆ ಟಾರ್ಚರ್ ಕೊಡೋ ಬದಲು, ವಿಷ ಕೊಟ್ಬಿಡಿ.. ವಿಷ ತಗೊಂಡು ಸಾಯ್ತೆನೆ ಎಂದು ಕೋರ್ಟ್ನಲ್ಲೇ ನಟ ದರ್ಶನ್ ಭಾವುಕರಾಗಿದ್ದಾರೆ..
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ಇಂದು ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರದಿಂದ ಹಾಜರಾದ ದರ್ಶನ್, ಜೈಲಲ್ಲಿ ನನಗೆ ಕನಿಷ್ಠ ಸವಲತ್ತು ಸಿಕ್ತಿಲ್ಲ. ಒಂದು ಬೆಡ್ ಶೀಟ್ ಕೊಡಿ ಅಂದ್ರೆ ಕೊಡ್ತಿಲ್ಲ. ಒಂದು ತಲೆದಿಂಬು ಕೊಡಿ ಅಂದ್ರೆ ಕೊಡ್ತಿಲ್ಲ.. ನನ್ನನ್ನು ಜೈಲು ಸಿಬ್ಬಂದಿ ನಿಕೃಷ್ಟವಾಗಿ ನೋಡ್ತಾರೆ. ಜೈಲು ಕೋಣೆಯಿಂದ ಹೊರಗೆ ಬಿಡ್ತಿಲ್ಲ..ಸೂರ್ಯನ ದರ್ಶನ ಮಾಡಿ ಎಷ್ಟು ದಿನವಾಯ್ತೋ..ಥಂಡಿಯಲ್ಲಿ ಮಲಗಿ ಮಲಗಿ ನನಗೆ ಅನಾರೋಗ್ಯ ಉಂಟಾಗಿದೆ. ನನ್ನ ಕೈಗೆ ಫಂಗಸ್ ಇನ್ಫೆಕ್ಷನ್ ಆಗಿದೆ.. ಗಾಯ ಆಗಿದೆ. ವೈದ್ಯರು ಸಹ ನನಗೆ ಸರಿಯಾಗಿ ಟ್ರೀಟ್ಮೆಂಟ್ ಕೊಡ್ತಿಲ್ಲ. ಪರಪ್ಪನ ಅಗ್ರಹಾರ ಜೈಲು ನನಗೆ ನರಕವಾಗಿದೆ.. ನರಕದಲ್ಲಿ ಇರೋದಕ್ಕಿಂತ ಒಂಚೂರು ವಿಷ ಕೊಟ್ಬಿಡಿ..ಜಡ್ಜ್ ಮುಂದೆ ನಟ ದರ್ಶನ್ ಕಣ್ಣೀರು ಇಟ್ಟಿದ್ದಾರೆ.. ದರ್ಶನ್ ಪರಿಸ್ಥಿತಿ ಕಂಡು ದರ್ಶನ್ ಫ್ಯಾನ್ಸ್ ಜೈಲು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಪ್ರಾಸಿಕ್ಯೂಷನ್ ಮತ್ತು ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್ ಇಂದು ಮಧ್ಯಾಹ್ನ 3 ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.