ದತ್ತಪೀಠದ ತಪ್ಪಲಿನಲ್ಲಿ ಬಾಲಕಿ ನಾಪತ್ತೆ ಕೇಸ್

ಚಿಕ್ಕಮಗಳೂರು: ಚಿಕ್ಕಮಗಳೂರಿನ ದತ್ತಪೀಠದ ಮಾಣಿಕ್ಯಾಧಾರ ಜಲಪಾತದ ಬಳಿ ಕೇರಳ ಮೂಲದ ಬಾಲಕಿ ಶ್ರೀನಂದಾ ನಾಪತ್ತೆಯಾದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದ್ದು, ಅಪಹರಣದ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿಯ ತಾಯಿ ರೋಹಿಣಿ ಅವರು ತಮ್ಮ ಮಗಳು ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದಿರಲು ಸಾಧ್ಯವೇ ಇಲ್ಲ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಯಾರೋ ಅಪರಿಚಿತರು ಮಾದಕ ದ್ರವ್ಯ ನೀಡಿ ಆಕೆಯನ್ನು ಅಪಹರಿಸಿರಬಹುದು ಎಂಬ ಗಂಭೀರ ಸಂಶಯವನ್ನು ಅವರು ವ್ಯಕ್ತಪಡಿಸಿರುವುದು ತನಿಖೆಯ ದಿಕ್ಕನ್ನೇ ಬದಲಿಸಿದೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಶ್ರೀನಂದಾ, ಕುಟುಂಬದ 41 ಸದಸ್ಯರೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ವಿಶೇಷವೆಂದರೆ, ಕಾಣೆಯಾಗುವ ಕೇವಲ ಐದು ನಿಮಿಷಗಳ ಮುಂಚೆಯಷ್ಟೇ ಆಕೆ ತಂದೆಯ ಮೊಬೈಲ್ನಲ್ಲಿ ಅತ್ಯಂತ ಸಡಗರದಿಂದ ರೀಲ್ಸ್ ಮಾಡಿದ್ದಳು. ಜನದಟ್ಟಣೆ ಇರುವ ಪ್ರದೇಶದಲ್ಲೇ ಆಕೆ ಹಠಾತ್ತನೆ ಮಾಯವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ನಿಗೂಢ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ಚಿಕ್ಕಮಗಳೂರಿಗೆ ಭೇಟಿ ನೀಡಿ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಮತ್ತೊಂದೆಡೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಮರೋಪಾದಿಯಲ್ಲಿ ಶೋಧ ಕಾರ್ಯ ನಡೆಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ನೂರಾರು ಪೊಲೀಸ್, ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಜೀವದ ಹಂಗು ತೊರೆದು, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಸುಮಾರು 300 ಅಡಿ ಆಳದ ಭೀಕರ ಕಂದಕಕ್ಕೆ ಇಳಿದು ಶೋಧ ನಡೆಸುತ್ತಿದ್ದಾರೆ. ಬಾಲಕಿಯು ಕಂದಕಕ್ಕೆ ಬಿದ್ದಿದ್ದಾಳೆಯೇ ಅಥವಾ ತಾಯಿ ಶಂಕಿಸಿದಂತೆ ಯಾರಾದರೂ ಕಿಡ್ನಾಪ್ ಮಾಡಿದ್ದಾರೆಯೇ ಎಂಬ ಸತ್ಯಾಸತ್ಯತೆ ತಿಳಿಯಲು ತನಿಖಾ ತಂಡಗಳು ಎಲ್ಲಾ ಆಯಾಮಗಳಿಂದಲೂ ಕಾರ್ಯಾಚರಣೆ ತೀವ್ರಗೊಳಿಸಿವೆ.




