ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ, ತಮ್ಮ ಈ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗೆ ಅತ್ಯಂತ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮಗೆ ಸಿಕ್ಕ ಅಭೂತಪೂರ್ವ ಬೆಂಬಲ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
“ನಮ್ಮ ಕನ್ನಡಿಗರಿಗೆ ಯಾವ ರೀತಿ ಕೃತಜ್ಞತೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ಬಿಗ್‌ಬಾಸ್ ಮನೆಯಲ್ಲಿದ್ದಾಗ ಹೊರಗಡೆ ನನಗೆ ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಗುತ್ತಿದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆಚೆ ಬಂದಮೇಲೆ ಜನರ ಪ್ರೀತಿ ನೋಡಿ ನಿಜಕ್ಕೂ ನಂಬಲಾಗುತ್ತಿಲ್ಲ,” ಎಂದು ನಟ ಸಂತಸ ಹಂಚಿಕೊಂಡಿದ್ದಾರೆ.
ತಮ್ಮ ಗೆಲುವಿನ ಹಾದಿಯಲ್ಲಿ ಗಡಿ ಕಾಯುವ ಸೈನಿಕರ ಪಾತ್ರವನ್ನೂ ಸ್ಮರಿಸಿದ ಅವರು, “ದೇಶ ಕಾಯುವ ಯೋಧರು ಕೂಡ ವಿಡಿಯೋ ಮಾಡಿ ನನಗೆ ಹಾರೈಸಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ವಿದೇಶಗಳಿಂದಲೂ ಜನರು ನನಗೆ ಸಪೋರ್ಟ್ ಮಾಡಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ನನ್ನನ್ನು ತಮ್ಮ ಮನೆಯ ಮಗನಂತೆ ಬೆಂಬಲಿಸಿದ್ದಾರೆ,” ಎಂದು ಹೇಳಿದ್ದಾರೆ.
ಸಂಕ್ರಾಂತಿ ಹಬ್ಬದ ವೇಳೆ ರೈತರು ತಮ್ಮ ಹಸುಗಳ ಮೇಲೆ ಗಿಲ್ಲಿ ನಟನ ಚಿತ್ರ ಬಿಡಿಸಿ ಹರಸಿದ್ದರು. ಆಟೋಗಳ ಮೇಲೆ ಸ್ಟಿಕ್ಕರ್ ಹಾಕಿ, ಅಭಿಮಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆ ಬಗ್ಗೆ ಮಾತನಾಡುತ್ತಾ, “ಯಾವುದೇ ಮೀಡಿಯಾ ಅಥವಾ ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಅಥವಾ ಟ್ರೋಲ್ ವಿಡಿಯೋ ಈವರೆಗೂ ಕಾಣಲಿಲ್ಲ. ಈ ಪ್ರೀತಿಯನ್ನು ನಾನು ಜೀವನದ ಕೊನೆಯವರೆಗೂ ಉಳಿಸಿಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ..


