ಮುಂಬೈ: ಬಹುದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ಕೊನೆಗೂ ಖಚಿತವಾಗಿದ್ದು ಟೀಂ ಇಂಡಿಯಾದ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಈ ವಿಚಾರವನ್ನು ತಿಳಿಸಿದ್ದಾರೆ. ಪುರುಷರ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ನೇಮಿಸಲಾಗಿದೆ ಜಯ್ ಶಾ ಪ್ರಕಟಿಸಿದರು.
ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಅವರನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಆಧುನಿಕ ಕ್ರಿಕೆಟ್ ಬಹಳ ವೇಗವಾಗಿ ಬದಲಾಗುತ್ತಿದ್ದು ಗೌತಮ್ ಅವರು ಈ ಬದಲಾವಣೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಹಲವು ಪಾತ್ರಗಳನ್ನು ನಿರ್ವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲು ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂಬ ವಿಶ್ವಾಸ ನನಗಿದೆ. ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಗೌತಮ್ ಗಂಭೀರ್ ಅವರಿಗೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಜಯ್ ಶಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರ ನಂತರ ಟೀಂ ಇಂಡಿಯಾ ಮುಖ್ಯಕೋಚ್ ಹುದ್ದೆ ಅಲಂಕರಿಸುವಂತೆ ಬಿಸಿಸಿಐ ಈ ಹಿಂದೆ ಗೌತಮ್ ಗಂಭೀರ್ ಬಳಿ ಮನವಿ ಮಾಡಿರುವುದಾಗಿ ವರದಿಯಾಗಿತ್ತು. ಟಿ20 ವಿಶ್ವಕಪ್ ಟೂರ್ನಿ ಬಳಿಕ ದ್ರಾವಿಡ್ ಅವರ ಮುಖ್ಯಕೋಚ್ ಹುದ್ದೆಯ ಅವಧಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com