
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ರಾಜಧಾನಿ ಬೆಂಗಳೂರಿನ ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಿದೆ. ಅದರಲ್ಲೂ ವಿಶೇಷವಾಗಿ ಬಡವರು ಮತ್ತು ಕಾರ್ಮಿಕರ ಪಾಲಿನ ಅನ್ನದಾತನಂತಿರುವ ಇಂದಿರಾ ಕ್ಯಾಂಟೀನ್‌ಗಳು ಗ್ಯಾಸ್ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.
ವಾಣಿಜ್ಯ ಸಿಲಿಂಡರ್‌ಗಳ ಅಭಾವದ ಹಿನ್ನೆಲೆ ಗುತ್ತಿಗೆ ಕಂಪನಿಗಳು ಆಹಾರ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ನಗರದ ಸುಮಾರು 60ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಳೆದ ಕೆಲವು ದಿನಗಳಿಂದ ಬಂದ್ ಆಗಿವೆ. ಈ ಗ್ಯಾಸ್ ಟ್ರಬಲ್‌ನಿಂದಾಗಿ ಹೋಟೆಲ್ ಉದ್ಯಮ ಕೂಡ ಕಂಗಾಲಾಗಿದ್ದು, ದಿನನಿತ್ಯದ ಆಹಾರಕ್ಕಾಗಿ ಕ್ಯಾಂಟೀನ್ ಅವಲಂಬಿಸಿದ್ದ ಸಾವಿರಾರು ಜನರಿಗೆ ತೀವ್ರ ತೊಂದರೆಯುಂಟಾಗಿದೆ.
ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಿರುವ ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ಬಿಕ್ಕಟ್ಟನ್ನು ಬಗೆಹರಿಸಲು ತಕ್ಷಣದ ಕ್ರಮ ಕೈಗೊಂಡಿದೆ. ಜಿಬಿಎ ಅಧಿಕಾರಿಗಳು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಜೊತೆ ತುರ್ತು ಸಭೆ ನಡೆಸಿದ್ದು, ಸಂಕಷ್ಟದಲ್ಲಿರುವ ಕ್ಯಾಂಟೀನ್‌ಗಳಿಗೆ ಆದ್ಯತೆಯ ಮೇರೆಗೆ ಗ್ಯಾಸ್ ಪೂರೈಸುವಂತೆ ಮನವಿ ಮಾಡಿದ್ದಾರೆ. ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಈ ಸಭೆಯಲ್ಲಿ ತಕ್ಷಣಕ್ಕೆ 80 ಸಿಲಿಂಡರ್‌ಗಳನ್ನು ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಸಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಮ್ಮತಿಸಿದೆ.
ಈ ನಿರ್ಧಾರದಿಂದಾಗಿ ಸ್ಥಗಿತಗೊಂಡಿದ್ದ ಆಹಾರ ತಯಾರಿಕೆ ಪ್ರಕ್ರಿಯೆ ಮತ್ತೆ ಚುರುಕುಗೊಳ್ಳಲಿದ್ದು, ಇನ್ನು ಎರಡು ದಿನಗಳಲ್ಲಿ ನಗರದ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳು ಯಥಾಸ್ಥಿತಿಗೆ ಮರಳಲಿವೆ ಎಂದು ಪ್ರಾಧಿಕಾರ ತಿಳಿಸಿದೆ.




