Thursday, August 21, 2025
26.4 C
Bengaluru
Google search engine
LIVE
ಮನೆUncategorizedಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ 3 ಲೊಕಸಭಾ ಕ್ಷೇತ್ರ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಬಂದು ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಸೇರಿದಂತೆ ಎಲ್ಲಾ ಮತಗಟ್ಟೆ ಸಾಮಗ್ರಿಗಳನ್ನು ತೆಗೆದುಕೊಂಡು ಬಿ.ಎಂ.ಟಿ.ಸಿ, ಕೆ.ಎಸ್‌.ಆರ್.ಟಿ.ಸಿ, ಇತರೆ ವಾಹನಗಳ ಮೂಲಕ ಮತಗಟ್ಟೆಗಳಿಗೆ ಪೊಲೀಸ್ ಬಂದೋಬಸ್ತ್ ಮೂಲಕ ತೆರಳಲಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ‌‌ ಎಂದು ತಿಳಿಸಿದರು.

ನಾಳೆ ಏಪ್ರಿಲ್ 26ರಂದು ಬೆಳಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದ್ದು, 7.00 ಗಂಟೆಯೊಳಗಾಗಿ ಪೂರ್ಣಗೊಳ್ಳಲಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಎಲ್ಲಾ ಮಸ್ಟರಿಂಗ್ ಕೇಂದ್ರಗಳಿಂದ ಬ್ಯಾಲೆಟ್ ಯುನಿಟ್(ಇವಿಎಂ), ಕಂಟ್ರೋಲ್ ಯುನಿಟ್(ಸಿಯು), ವಿವಿ ಪ್ಯಾಟ್ ಗಳನ್ನು ಮತಗಟ್ಟೆಗಳಿಗೆ ತಲುಪಿಸಲು ಈಗಾಗಲೇ ರೂಟ್ ಸಿದ್ದಪಡಿಸಿಕೊಳ್ಳಲಾಗಿದೆ. ಆ ಪ್ರಕಾರ ಒಂದು ಬಸ್ ನಲ್ಲಿ 5 ರಿಂದ 6 ಮಟಗಟ್ಟೆಗಳ ಅಧಿಕಾರಿಗಳು ತೆರಳಲಿದ್ದಾರೆ. ಇಂದು ಮಧ್ಯಾಹ್ನ ನಂತರ ಮತಗಟ್ಟೆಗಳಿಗೆ ತೆರಳಲಿದ್ದಾರೆ ಎಂದು ಹೇಳಿದರು.

ಅಣುಕು ಮತದಾನದ ವೇಳೆ ಇವಿಎಂ ನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು(Route Officer) ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ.

ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣೆ:

ನಗರದ 28 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು, ಇವಿಎಂ, ಸಿಯು, ವಿವಿ ಪ್ಯಾಟ್, ಮತದಾನದ ದಿನ ಅಗತ್ಯವಿರುವ ಚೆಕ್ ಲಿಸ್ಟ್ ಪ್ರಕಾರ ಎಲ್ಲಾ ರೀತಿಯ ಸಾಮಗ್ರಿಗಳು, ಮತಗಟ್ಟೆಗಳಲ್ಲಿ ರಾತ್ರಿ ಉಳಿಯಲು‌ ಮತಗಟ್ಟೆ ಅಧಿಕಾರಿಗಳಿಗೆ ಬೇಕಾದಂತಹ ವ್ಯವಸ್ಥೆ ಮಾಡಲಾಗಿದೆ.

ಭೇಟಿ ನೀಡಿದ ಮಸ್ಟರಿಂಗ್ ಕೇಂದ್ರಗಳ ವಿವರ:

1. ಶೇಷಾದ್ರಿಪುರಂ ಕಾಲೇಜು, ಯಲಹಂಕ.
2. ಬಿಇಎಲ್ ಹೈ ಸ್ಕೂಲ್, ಬ್ಯಾಟರಾಯನಪುರ.
3. ಕ್ರೈಸ್ಟ್ ಯೂನಿವರ್ಸಿಟಿ, ದಾಸರಹಳ್ಳಿ.

ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತರುಗಳಾದ ಮೊಹ್ಮದ್ ನಯೀಮ್ ಮೊಮಿನ್, ಬಾಲಶೇಖರ್, ಸಹಾಯಕ ಚುನಾವಣಾಧಿಕಾರಿಗಳಾದ ಸುರೇಶ್, ಪ್ರಮೋದ್ ಪಾಟೀಲ್, ಬಾಲಪ್ಪ ಹಂದಿಗುಂದ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments