ಬೆಂಗಳೂರು: ಆದಿತ್ಯ ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ “ಕಾಂಗರೂ” ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಅರಸಪ್ಪ ಮಾಜಿ ಅಧ್ಯಕ್ಷರು ಕರ್ನಾಟಕ ಸಣ್ಣ ಕೈಗಾರಿಕೆ ಉದ್ಯಮ, ಆರಿಫ್ ಅಧ್ಯಕ್ಷರು ಪೀಣ್ಯ ಕೈಗಾರಿಕಾ ಉದ್ಯಮ ಹಾಗೂ ನಿರ್ಮಾಪಕ ಸಿಲ್ಕ್ ಮಂಜು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ಕುಣಿಗಲ್, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ಆರ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನಾವು ಆರು ಜನ ಸ್ನೇಹಿತರು. ನಾವೆಲ್ಲಾ ಸಣ್ಣ ಕೈಗಾರಿಕೋದ್ಯಮಿಗಳು. ಪೀಣ್ಯದಲ್ಲಿ ನಮ್ಮ ಫ್ಯಾಕ್ಟರಿ ಇದೆ. ಸಿನಿಮಾ ರಂಗ ನಮಗೆ ಹೊಸತು. ಸ್ನೇಹಿತರ ಮೂಲಕ ಪರಿಚಿತರಾದ ನಿರ್ದೇಶಕ ಕಿಶೋರ್ ಅವರು ಈ ಚಿತ್ರದ ಕಥೆ ಹೇಳಿದ ರೀತಿ ನಮಗೆ ಇಷ್ಟವಾಯಿತು. ಚಿತ್ರ ನಿರ್ಮಾಣಕ್ಕೆ ಮುಂದಾದೆವು. ನಟ ಆದಿತ್ಯ ಹಾಗೂ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ. ಮೇ 3 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ಆರು ಜನ ನಿರ್ಮಾಪಕರ ಪರವಾಗಿ ಚೆನ್ನಕೇಶವ ಬಿ ಸಿ ಮಾತನಾಡಿದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ಫ್ಯಾಮಿಲಿ ಆಡಿಯನ್ಸ್ ಗಾಗಿಯೇ ಮಾಡಿರುವ ಕಥೆ ಇದು. ಇನ್ನು ಕಾಂಗರೂ ಮೃದುಸ್ವಭಾವದ ಪ್ರಾಣಿ. ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಬಂದರೆ ಅದು ಯಾರನ್ನು ಬಿಡುವುದಿಲ್ಲ. ಇದೇ ಚಿತ್ರದ ಕಥಾಸಾರಾಂಶ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ನಾಯಕ ಆದಿತ್ಯ, ನಾಯಕಿ ರಂಜನಿ ರಾಘವನ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯಿಸಿದ್ದರೆ. ಸಾಧುಕೋಕಿಲರ ಸಂಗೀತ ನಿರ್ದೇಶನ ಹಾಗೂ ಉದಯಲೀಲಾ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರು ನಿರ್ದೇಶಕ ಕಿಶೋರ್ ಮೇಗಳಮನೆ.
ನಿರ್ದೇಶಕ ಕಿಶೋರ್ ಅವರು ಕಥೆ ಕೇಳಿ ಎಂದರು. ನಾನು ಸರಿ ಎಂದೆ. ಆನಂತರ ಕೇಳುವುದು ಬೇಡ ಸರ್ ಸಿನಿಮಾನೇ ತೋರಿಸುತ್ತೇನೆ ಎಂದರು. ನನಗೆ ಆಶ್ಚರ್ಯವಾಯಿತು. ಚಿತ್ರದ ಕಥೆಯನ್ನು ಅನಿಮೇಶನ್ ಮೂಲಕ ತೋರಿಸಿದ ಪ್ರಥಮ ನಿರ್ದೇಶಕ ಇವರೆ ಇರಬಹುದು. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರ ಸೇರಿದಂತೆ ಎಲ್ಲಾ ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಎನ್ನುದರು ಆದಿತ್ಯ.
ನಾನು ಈ ಚಿತ್ರದಲ್ಲಿ ಮನೋವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದು ನಾನು ನಾಯಕಿಯಾಗಿ ನಟಿಸಿರುವ ಐದನೇ ಚಿತ್ರ ಎಂದರು ನಾಯಕಿ ರಂಜನಿ ರಾಘವನ್ ಹೇಳಿದರು.
ಚಿತ್ರದಲ್ಲಿ ನಟಿಸಿರುವ ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಶುಭಲಕ್ಷ್ಮೀ, ಗೌತಮ್ ಮುಂತಾದವರು “ಕಾಂಗರೂ” ಚಿತ್ರದ ಕುರಿತು ಮಾತನಾಡಿದರು.