ಯುಗಾದಿ 2024 :ಯುಗಾದಿ ಹಬ್ಬ ಹಿಂದೂಗಳಿಗೆ ನೂತನ ವರ್ಷದ ಆರಂಭ ದಿನ. ಕ್ಯಾಲೆಂಡರ್ ಗಳಲ್ಲಿ ಜನವರಿ 1 ಅನ್ನು ಹೊಸ ವರ್ಷ ಎಂದು ಆಚರಿಸಿದರೂ ಹಿಂದೂ ಸಂಪ್ರದಾಯದಂತೆ ಯುಗಾದಿ ದಿನವೇ ಹೊಸ ವರ್ಷ. 2024ರ ಯುಗಾದಿ ಏಪ್ರಿಲ್ 9, ಮಂಗಳವಾರದಂದು ಬಂದಿದೆ. ಕ್ಯಾಲೆಂಡರ್ ಗಳಲ್ಲಿ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿ ಪದವೇ ಹೇಳುವಂತೆ ಯುಗದಿ ಎಂದರೆ ವರ್ಷದ ಆರಂಭ ಎಂದು ಸೂಚಿಸುತ್ತದೆ. ಈ ವಿಶೇಷ ದಿನವನ್ನು ಕರ್ನಾಟಕದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಿಂದೂ ಸಂಪ್ರದಾಯದಂತೆ ಯುಗಾದಿ ಹಬ್ಬವು ಹೊಸ ಯುಗ, ವರ್ಷ ಮತ್ತು ಭವಿಷ್ಯದ ಆರಂಭವಾಗಿದೆ ಎಂದು ನಂಬಲಾಗುತ್ತದೆ.
ಯುಗಾದಿಯಿಂದ ಭವಿಷ್ಯ ಬದಲಾಗುತ್ತೆ
ಯುಗಾದಿ ದಿನದಿಂದ ಮನುಷ್ಯನ ಭವಿಷ್ಯ ಚಕ್ರ ಸಹ ಬದಲಾಗುತ್ತದೆ ಎನ್ನಲಾಗುತ್ತದೆ. ವರ್ಷದ ಭವಿಷ್ಯವು ಯುಗಾದಿ ದಿನದಿಂದ ಪ್ರಾರಂಭವಾಗುತ್ತದೆ. ಜ್ಯೋತಿಷಿಗಳು ಸಹ ಭವಿಷ್ಯವನ್ನು ಹೇಳಲು ಯುಗಾದಿ ಹಬ್ಬದಿಂದ ಆರಂಭವಾಗುವ ಸಂವತ್ಸರವನ್ನೇ ಪರಿಗಣಿಸುತ್ತಾರೆ. ಹೊಸ ಪಂಚಾಂಗವು ಯುಗಾದಿ ಹಬ್ಬದಿಂದಲೇ ಶುರುವಾಗುತ್ತದೆ.
ಬೇವು-ಬೆಲ್ಲದ ಮಹತ್ವ
ಯುಗಾದಿ ಹಬ್ಬ ಎಂದ ಕೂಡಲೇ ಆ ದಿನ ಬೇವು-ಬೆಲ್ಲ ಎರಡನ್ನೂ ಸೇವಿಸುತ್ತೇವೆ. ವಿಶೇಷ ಅರ್ಥವನ್ನೊಳಗೊಂಡಿರುವ ಬೇವು-ಬೆಲ್ಲವನ್ನು ಹಿಂದೂಗಳು ತಪ್ಪದೇ ಯುಗಾದಿ ಹಬ್ಬದಂದು ಸವಿಯುತ್ತಾರೆ. ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ತಿನ್ನುವುದು ಸಂಪ್ರದಾಯ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ಸುಖಗಳನ್ನು ಪ್ರತಿಬಿಂಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಜೀವನದಲ್ಲಿ ಸುಖ-ದುಃಖ ಇರುತ್ತದೆ. ಎರಡನ್ನೂ ಅನುಭವಿಸಬೇಕೆಂಬ ಅರ್ಥವನ್ನು ನೀಡುವ ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎಂದು ನಮ್ಮ ಹಿರಿಯರು ಯಿಂದಿನಿಂದ ಪದ್ಧತಿಯಾಗಿ ಮಾಡಿಕೊಂಡು ಬಂದಿದ್ದಾರೆ.
ಬೇವು-ಬೆಲ್ಲ ತಿನ್ನುವುದರ ಹಿಂದಿದೆ ಇರುವ ಕಾರಣ
ಮನುಷ್ಯ ಬೇವು-ಬೆಲ್ಲ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂದು ವೈಜ್ಞಾನಿಕವಾಗಿಯೂ ತಿಳಿದು ಬಂದಿದೆ.
ಬೇವು: ಬೇವಿನಲ್ಲಿರುವ ಔಷಧೀಯ ಗುಣಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಸಂತ ಋತುವಿನ ಆರಂಭದೊಂದಿಗೆ ಸಮೃದ್ಧವಾಗಿ ಬೆಳೆಯುವ ಬೇವು ಇಡೀ ವರ್ಷ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಬೇವಿನ ಎಲೆಗಳು ಎಲ್ಲಾ ಕಾಲಕ್ಕೂ ಸಿಗುವಂತಾಗಿದೆ.
ಬೆಲ್ಲ: ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶಗಳು ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೇಸಿಯಮ್, ಪೊಟ್ಯಾಶಿಯಂ ಅಪಾರವಾಗಿರುತ್ತದೆ. ಬೆಲ್ಲ ಸೇವಿಸಿದರೆ ತೂಕ ನಷ್ಟದ ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಬೆಲ್ಲದಲ್ಲಿರುವ ಪೊಟ್ಯಾಶಿಯಂ ಜೈವಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮನುಷ್ಯನಿಗೆ ನಿಶಕ್ತಿಯನ್ನು ದೂರ ಮಾಡುತ್ತದೆ. ಬೆಲ್ಲವನ್ನು ಸೇವಿಸುವುದರಿಂದ ದೇಹ ಚೈತನ್ಯವಾಗಿರುತ್ತದೆ.