ಕೋಲಾರ : ಕೋಲಾರದಲ್ಲಿ ಸಿಪಿಎಂ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿಸಿ ಬಯ್ಯಾರೆಡ್ಡಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿಕೊಂಡಿದೆ, ಕೋಲಾರ ಜಿಲ್ಲೆಯಲ್ಲೂ ಬಿಸಿಲಿನ ತಾಪ ಹೆಚ್ಚಾಗಿದೆ.
ಉತ್ತರ ಕರ್ನಾಟಕದ ಭಾಗಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಜಾನುವಾರುಗಳಿಗೂ ಕುಡಿಯಲು ನೀರಿಲ್ಲ, ಮೇವಿನ ಕೊರತೆಯಾಗಿದೆ. ಬರಗಾಲ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಕೇಂದ್ರದಿಂದ ತಜ್ಞರ ತಂಡ ಬಂದು ಪರಿಶೀಲನೆ ಮಾಡಿ ಹೋದರು ಕಳೆದ 6 ತಿಂಗಳಿಂದ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ.
ಈ ಬಗ್ಗೆ 27 ಸಂಸದರು ಪಾರ್ಲಿಮೆಂಟ್ ನಲ್ಲಿ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. 36 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ಪರಿಹಾರ ಕೇಳಿದ್ರೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ತೆರಿಗೆ ವಿಚಾರದಲ್ಲಿ ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ದ್ರೋಹ ಮಾಡಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಅಭ್ಯರ್ಥಿ ಬಗ್ಗೆ ಪಕ್ಷದ ಒಳಗೆ ಚರ್ಚೆ ಮಾಡಿ ತೀರ್ಮಾನ ಮಾಡಿಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದವರು ಬೀದಿಗೆ ಬಂದು ರಂಪಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಒಂದಾಗಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.