ಗದಗ : ಒಂದಲ್ಲ ಎರಡಲ್ಲ. ಬರೋಬ್ಬರಿ 25 ಕೆಜಿ ಚಿನ್ನ. ಎಲ್ಲವೂ ಕಾಮರತಿಗೆ ಅಲಂಕಾರಕ್ಕೆ. ಹೌದು, ಹೋಳಿ ಹುಣ್ಣಿಮೆ ನಿಮಿತ್ಯ ಗದಗ ನಗರದ ಚಂದ್ರಸಾಲಿ ಕಿಲ್ಲಾ ಓಣಿಯಲ್ಲಿ ಕೂರಿಸಿರೋ ರತಿ ಕಾಮರಿಗೆ ಅಲಂಕಾರಕ್ಕೆ ಊರ ಜನರು ಕೊಟ್ಟಿರೋ ಪ್ಯೂರ್ ಗೋಲ್ಡ್ ಆಭರಣಗಳಿವು. ಖಿಲ್ಲಾ ಓಣಿಯ ಕಾಮರತಿ ಉತ್ಸವಕ್ಕೆ ಬರೋಬ್ಬರಿ 157 ವರ್ಷಗಳ ಇತಿಹಾಸ ಇದೆ.
1865 ರಿಂದ ಈವರೆಗೆ ಇಲ್ಲಿ ಚಿನ್ನದ ಅಲಂಕಾರ ಹಾಗೂ ಕಾಮರತಿಯ ಮೆರವಣಿಗೆ ನಡೀತಾ ಬಂದಿದೆ. ರಾಜ್ಯದಲ್ಲೇ ಅತ್ಯಂತ ವಿಶೇಷ ಕಾಮರತಿ ಉತ್ಸವ ಆಗೋದು ಗದಗದಲ್ಲೇ. ಖಿಲ್ಲಾ ಓಣಿಯ ಕಾಮರತಿಯನ್ನ ಸರ್ಕಾರಿ ಕಾಮ ಅಂತಾನೂ ಕರೆಯಲಾಗುತ್ತೆ. ಈ ಸರ್ಕಾರಿ ಕಾಮರತಿಗೆ ಚಿನ್ನ ಅಲಂಕಾರ ಮಾಡಿದ್ರೆ ಬರುವ ವರ್ಷ ಚಿನ್ನ ದ್ವಿಗುಣ ಆಗುತ್ತೆ ಅನ್ನೋದು ನಂಬಿಕೆ.
ಹೀಗಾಗಿ ಗದಗ ನಗರ ಅಲ್ದೆ ವಿವಿಧೆಡೆಯಿಂದ ಬರೋ ಭಕ್ತರು ರತಿಗೆ ಚಿನ್ನದ ಆಭರಣವನ್ನ ಅಲಂಕಾರಕ್ಕೆ ಕೋಡ್ತಾರೆ. ಉತ್ಸವ ಸಮಿತಿ ಸದಸ್ಯರು ಚಿನ್ನ ಪಡೆದು ಅದಕ್ಕೆ ಟ್ಯಾಗ್ ಹಾಕಿ ಇರಿಸ್ತಾರೆ. ನಂತರ ರಂಗಪಂಚಮಿಯ ದಿನ ರತಿಗೆ ಅಲಂಕಾರ ಮಾಡಲಾಗುತ್ತದೆ. ಈ ಬಾರಿ ಬರೋಬ್ಬರಿ 25 ರಿಂದ 30 ಕೆಜಿ ಚಿನ್ನವನ್ನ ಭಕ್ತರು ಕೊಟ್ಟಿದಾರೆ. ಬಂಗಾರದ ಕಾಮರತಿ ಸಂತಾನ ಕರುಣಿಸೋ ದೈವವೂ ಹೌದು ಮಕ್ಕಳಾಗದ ಅದೆಷ್ಟೋ ಜನ ಇಲ್ಲಿಗೆ ಬಂದು ಚಿನ್ನದ ತೊಟ್ಟಿಲು ಕಟ್ಟೋದ್ರಮೂಲಕ ಮಕ್ಕಳನ್ನ ಪಡೆದಿದ್ದಾರಂತೆ.
ಮದ್ವೆಯಾಗದ ಯುವಕ ಯುವತಿಯರು ಕಂಕಣ ಕಟ್ಟಿ ಹೋಗೋದ್ರಿಂದ ಮದ್ವೆಯಾಗುತ್ತಂತೆ.. ಹೀಗಾಗಿ ಇಷ್ಟಾರ್ಥ ಸಿದ್ಧಿಮಾಡುವ ರತಿ ಕಾಮನ ದರ್ಶನ ಪಡೆಯೋದಕ್ಕೆ ಗದಗ, ಕೊಪ್ಪಳ, ಹುಬ್ಬಳ್ಳಿ, ಬೆಳಗಾಗಿ ಸೇರಿದಂತೆ ಮಹಾರಾಷ್ಟ್ರ ದಿಂದಲೂ ಜನ ಬರ್ತಾರೆ. ಹರಿಕೆ ಕಟ್ಟಿ ಹೋಗ್ತಾರೆ. ಇಷ್ಟಾರ್ಥಗಳು ಸಿದ್ಧಿಯಾದಾಗ ರತಿ ಉಡಿತುಂಬಿ ಉತ್ಸವದಲ್ಲಿ ಭಾಗಿಯಾಗ್ತಾರೆ ಭಕ್ತರು.