ಬೆಂಗಳೂರು : ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಹಲವರಿಗೆ ರಿಲೀಫ್ ಸಿಕ್ಕಿದೆ. ಜೆಟ್ ಲ್ಯಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿ 8 ಮಂದಿಗೆ ನೋಟಿಸ್ ನೀಡಲಾಗಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ತಡರಾತ್ರಿ ಪಾರ್ಟಿ ಮಾಡಿಲ್ಲ, ಆರೋಪಿಗಳು ಊಟದ ಪಾರ್ಟಿ ಮಾಡಿದ್ದರು ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಸಂಬಂಧ ನಟ ದರ್ಶನ್ ಸೇರಿ ಎಲ್ಲರಿಗೂ ರಿಲೀಫ್ ಸಿಕ್ಕಿದೆ.
ಸಿನಿಮಾದ ಸಕ್ಸಸ್ ಹಿನ್ನೆಲೆ ಚಿತ್ರತಂಡ ಬೆಂಗಳೂರಿನ ರಾಜಾಜಿನಗರದ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಸ್ಟಾರ್ಸ್ ಪಾರ್ಟಿಗೆ ಎಲ್ಲರೂ ಸೇರಿದ್ದರು ಎನ್ನಲಾಗಿತ್ತು. ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್ ಗೆ ಅನ್ವಯವಾಗುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಮುಚ್ಚಬೇಕು.
ಒಂದು ಗಂಟೆ ಆಗುತ್ತಿದ್ದಂತೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು, ಅವಧಿ ಮೀರಿ ಪಾರ್ಟಿ ನಡೆಸಿದ ಆರೋಪದ ಹಿನ್ನೆಲೆ ಪೊಲೀಸರು ಪಬ್ ಮಾಲೀಕರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು, ನಂತರ ನಟರಿಗೂ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿದ್ದ 8 ಮಂದಿ ನಾವು ಪಾರ್ಟಿ ಮಾಡಿಲ್ಲ , ಊಟ ಮಾತ್ರ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು