ನವದೆಹಲಿ: ‘ಅಪ್ಪಿಕೋ ಚಳವಳಿ’ ಬಗ್ಗೆ ನೀವು ಕೇಳಿರಬಹುದು. ವರ್ಷಾನುಗಟ್ಟಲೇ ನಡೆದ ಈ ಚಳವಳಿಯಲ್ಲಿ ಸಾವಿರಾರು ಮರಗಳು ಕೊಡಲಿ ಏಟಿನಿಂದ ಬಚಾವ್ ಆಗಿವೆ. ಇಲ್ಲೊಬ್ಬ ಯುವಕ ಮರಗಳನ್ನು ತಬ್ಬಿಕೊಂಡು ವಿಶ್ವ ದಾಖಲೆ ಬರೆದು ಸುದ್ದಿಯಾಗಿದ್ದಾನೆ.
ಘಾನಾ ದೇಶದ 29 ವರ್ಷದ ಫಾರೆಸ್ಟ್ರಿ ಕಲಿಕೆಯ (forestry student) ವಿದ್ಯಾರ್ಥಿ ಅಬೂಬಕರ್ ತಾಹಿರು ಒಂದು ಗಂಟೆಯೊಳಗೆ 1,123 ಮರಗಳನ್ನು ತಬ್ಬಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಸುದ್ದಿಯಾಗಿದ್ದಾರೆ.
ಅಮೆರಿಕದ ಅಲಬಾಮಾದಲ್ಲಿರುವ ಟುಸ್ಕೆಗೀ ನ್ಯಾಷನಲ್ ಫಾರೆಸ್ಟ್‌ನಲ್ಲಿ ಈ ದಾಖಲೆಯನ್ನು ಮಾಡಲಾಗಿದೆ. ಅಬುಬಕರ್ ಪ್ರತಿ ನಿಮಿಷಕ್ಕೆ ಸುಮಾರು 19 ಮರಗಳನ್ನ ಅಪ್ಪಿಕೊಂಡಿದ್ದಾರೆ. ಪ್ರತಿ ಅಪ್ಪುಗೆಯು ಕಟ್ಟುನಿಟ್ಟಾದ ಮಾನದಂಡಗಳನ್ನು ಒಳಗೊಂಡಿತ್ತು. ಎರಡೂ ತೋಳುಗಳು ಮರದ ಸುತ್ತಲೂ ಸುತ್ತುವರಿದಿರಬೇಕಿತ್ತು. ಯಾವುದೇ ಮರವನ್ನು ಒಂದಕ್ಕಿಂತ ಹೆಚ್ಚು ಬಾರಿ ತಬ್ಬಿಕೊಳ್ಳುವಂತಿರಲಿಲ್ಲ. ಯಾವುದೇ ರೀತಿಯಲ್ಲಿ ಮರಕ್ಕೆ ಹಾನಿಯಾಗುವಂತಿರಲಿಲ್ಲ.
“ಈ ವಿಶ್ವ ದಾಖಲೆಯನ್ನು ಸಾಧಿಸಿರುವುದಕ್ಕೆ ತುಂಬಾ ಖುಷಿಯಾಗಿದೆ. ಇದು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಮರಗಳ ಪ್ರಾಮುಖ್ಯತೆ ಮತ್ತು ಪರಿಸರ ಸಂರಕ್ಷಣೆಯ ಅಗತ್ಯತ ಯನ್ನು ಎತ್ತಿ ತೋರಿಸಲು ಒಂದು ಅರ್ಥಪೂರ್ಣವಾದ ಸೂಚಕವಾಗಿದೆ” ಎಂದು ತಾಹಿರು ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವಿಡಿಯೋ ವೈರಲ್ ಆಗಿದೆ. ಅಬೂಬಕರ್ ಅವರ ಸಾಧನೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ಶ್ಲಾಘಿಸಿದ್ದಾರೆ.
ಘಾನಾದ ತೆಪಾದಲ್ಲಿನ ರೈತ ಸಮುದಾಯದಿಂದ ಬಂದ ಅಬೂಬಕರ್‌ಗೆ ಪ್ರಕೃತಿ ಸಂರಕ್ಷಣೆಯ ಆಸಕ್ತಿ ಚಿಕ್ಕ ವಯಸ್ಸಿನಿಂದಲೇ ಬಂದಿದೆ. ಘಾನಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಅರಣ್ಯಶಾಸ್ತ್ರದಲ್ಲಿ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಆಬರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಕಳೆದ ವರ್ಷ ಅಲಬಾಮಾಗೆ ತೆರಳಿದ್ದರು.
ಈ ವಿಶ್ವ ದಾಖಲೆಯನ್ನು ಮಾಡಿದ ಬಳಿಕ, ಅಬುಬಕರ್ ತಾಹಿರು ಪರಿಸರ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ಅರಣ್ಯ ರಕ್ಷಣೆಯಲ್ಲಿ ತನ್ನನು ತಾನು ತೊಡಗಿಸಿಕೊಳ್ಳಲಿದ್ದಾರೆ.