ರಾಯಚೂರು: ಐಪಿಎಲ್ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಯುವಕನೊಬ್ಬ ಲಾಡ್ಜ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ 29 ವರ್ಷದ ಮುದಿಬಸವ ಐಪಿಎಲ್ ಬೆಟ್ಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಹಣ ಕಳೆದುಕೊಂಡಿದ್ದ. ಸೋತ ಹಣ ಪಾವತಿಸಲಾಗದೆ ಯುವಕ ಕಿರುಕುಳಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ಸಿಂಧನೂರು ನಗರದ ಸಾಯಿ ರೆಸಿಡೆನ್ಸಿ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮುದಿಬಸವ ಐಪಿಎಲ್ ಬೆಟ್ಟಿಂಗ್‌ಗಾಗಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ. ಆದರೆ ಬೆಟ್ಟಿಂಗ್ ಕಟ್ಟಿದ ಎಲ್ಲ ಮ್ಯಾಚ್‌ಗಳು ಸೋತಿದ್ದವು. ಸಾಲದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಸಾಲಗಾರರ ಕಾಟಕ್ಕೆ ಬೇಸತ್ತ ಮುದಿಬಸವ ಲಾಡ್ಜ್ ರೂಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೂಮಿನ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡು ಲಾಡ್ಜ್ ಸಿಬ್ಬಂದಿ ಒಳಹೊಕ್ಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸಿಂಧನೂರು ನಗರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.


