ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಮತ್ತು ನಟ ಭುವನ್ ಪೊನ್ನಣ್ಣ ದಂಪತಿ ಬೆಂಗಳೂರಿನಲ್ಲಿ ಕರಾಳ ಅನುಭವವೊಂದಕ್ಕೆ ಸಾಕ್ಷಿ ಆಗಿದ್ದಾರೆ. ರೆಸ್ಟೋರೆಂಟ್‌ವೊಂದಕ್ಕೆ ಊಟಕ್ಕೆ ಹೋದಾಗ, ಅಲ್ಲಿನ ಕೆಲವರು ಹರ್ಷಿಕಾ ಪತಿ ಭುವನ್ ಮೇಲೆ ಹಲ್ಲೆ ಮಾಡಿದ್ದಾರೆ.
“ನಾವು ಕನ್ನಡದಲ್ಲಿ ಮಾತನಾಡಿದ್ದೇ ಅವರಿಗೆ ತಪ್ಪಾಗಿ ಕಾಣಿಸಿದೆ” ಎಂದು ನಟಿ ಹರ್ಷಿಕಾ ಪೂಣಚ್ಚ ಆರೋಪಿಸಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ ಅವರು ಬರೆದುಕೊಂಡಿದ್ದಾರೆ.
ನಾವು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ!
“ಗೆಳೆಯರೇ, ನಮ್ಮ ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ. ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದೆ. ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯವಾಗಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದ್ದೇನೆ” ಎಂದು ಹೇಳಿಕೊಂಡಿದ್ಧಾರೆ.