ಬೆಂಗಳೂರು: ಕಂದಾಯ ಅಧಿಕಾರಿಗಳು ಸದ್ದಿಲ್ಲದೇ ಆಸ್ತಿ ಮಾರ್ಗಸೂಚಿ ಹೆಚ್ಚುವರಿ ದರವನ್ನು ಸಂಗ್ರಹಿಸುತ್ತಿದ್ದಾರೆ. ಸರ್ಕಾರ ಅಕ್ಟೋಬರ್ 1ರಿಂದ ಶೇ.30ರಷ್ಟು ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದರೂ , ಸರಿಯಾಗಿ ಪ್ರಚಾರ ಮಾಡದ ಕಾರಣ ಆಸ್ತಿ ಕೊಳ್ಳುವವರಿಗೆ ಮಾಹಿತಿ ಕೊರತೆ ಇದೆ. ಇದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಎಲ್ಲ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ಅಲ್ಲಿ ಹೆಚ್ಚು ಆಗುವುದಿಲ್ಲ. ಆದರೆ, ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಖಂಡಿತ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದರು. ಆದರೆ ಕೆಲವು ಕಡೆ ಅಧಿಕಾರಿಗಳು ರಾಮನ ಲೆಕ್ಕ,ಕೃಷ್ಣನ ಲೆಕ್ಕ ಹೇಳಿ ಹೆಚ್ಚುವರಿ ಹಣ ಪೀಕುತ್ತಿದ್ದಾರಂತೆ. ಇದರಿಂದ ಜನ ರೋಸಿ ಹೋಗಿದ್ದಾರೆ.

ಹೆದ್ದಾರಿಗಳು, ವಿಮಾನ ನಿಲ್ದಾಣ, ಐಟಿ ಬಿಟಿ ಬಂದಿರುವ ಕಡೆ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ. ಸರಾಸರಿ ಶೇಕಡಾ 30ರಷ್ಟು ಮಾರ್ಗಸೂಚಿ ದರ ಏರಿಕೆ ಆಗಿದೆ.
ಸರ್ಕಾರ ಮಾರ್ಗಸೂಚಿ ದರ ಏರಿಕೆಯಿಂದ ವರ್ಷಕ್ಕೆ 2 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿಯನ್ನು ಹೊಂದಿದೆ.
ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಆದರೆ, ಅದು ಎರಡು ತಿಂಗಳ ಬಳಿಕ ಸರಿ ಆಗಲಿದೆ ಎಂದು ಕಂದಾಯ ಸಚಿವರು ಹೇಳಿದ್ದರು ಆದರೆ ಕಂದಾಯ ಅಧಿಕಾರಿಗಳು ಮನ ಬಂದಂತೆ ತೆರಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಸ್ಥಳಗಳಲ್ಲಿ, ಮಾರ್ಗದರ್ಶಿ ಮೌಲ್ಯಕ್ಕಿಂತ ಮಾರುಕಟ್ಟೆ ಮೌಲ್ಯವು 500 ಪಟ್ಟು ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನ ಮಾರ್ಗಸೂಚಿ ಮೌಲ್ಯ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಮತ್ತು ಮಾರುಕಟ್ಟೆ ಮೌಲ್ಯ 10 ಕೋಟಿ ರೂ.ಗಿಂತ ಹೆಚ್ಚಿದ್ದರೆ ಅಂತಹ ಕಡೆಗಳಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ.
ನಿತ್ಯ ಸರಾಸರಿ 10,000ದಿಂದ 15,000 ಆಸ್ತಿ ನೋಂದಣಿಯಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ 1500 ಕೋಟಿ ರೂ.ಗೂ ಹೆಚ್ಚು ಆದಾಯವನ್ನು ಸರಕಾರ ಗಳಿಸಿದೆ ಎನ್ನಲಾಗಿದೆ. ಒಟ್ಟಾರೆ ಜನರಿಗೆ ಆಸ್ತಿತೆರಿಗೆ ಹೆಚ್ಚಳದ ಬಗ್ಗೆ ಇನ್ನಷ್ಟು ಅರಿವು ಮೂಡಿಸದೇ ಕಂದಾಯ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಜನ ಕಿಡಿಕಾರುತ್ತಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


