ಗದಗ: ಗದಗ ಶಹರ ಹಾಗೂ ಬೆಟಗೇರಿ ಬಡಾವಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. 7 ಮನೆಗಳಲ್ಲಿ ಕಳತನವಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದಾಗ ಅಂತಾರಾಜ್ಯ ಕಳ್ಳರ ಸುಳಿವು ಸಿಕ್ಕಿದೆ. ಗದಗ ಎಸ್‌ಪಿ ಬಿ.ಎಸ್.ನ್ಯಾಮಗೌಡ ಸುದ್ದಿಗೋಷ್ಠಿ ನಡೆಸಿ ಈ ಕುಖ್ಯಾತ ಕಳ್ಳರ ಮಾಹಿತಿ ನೀಡಿದರು. ಬಂಧಿತರಿಂದ 7.60 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಬಂಗಾರದ ಆಭರಣಗಳು, 1.52 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದವರು ಮೂಲತಃ ತಮಿಳುನಾಡಿನವರಾಗಿದ್ದು,ಹೈದ್ರಾಬಾದ್ ನಲ್ಲಿ ವಾಸವಾಗಿದ್ದರು. ಗದಗ ನಗರಕ್ಕೆ ಆಗಮಿಸಿ ಕೀಲಿ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ನಂತರ ಮತ್ತೆ ಟ್ರೈನ್ ಮೂಲಕ ಹೈದ್ರಾಬಾದ್ ಗೆ ಪ್ರಯಾಣ ಮಾಡ್ತಿದ್ದರು. ಈ ಬಗ್ಗೆ ಗದಗ ಶಹರ ಹಾಗೂ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ಬೆನ್ನತ್ತಿದ ಪೊಲೀಸ್ ತಂಡ ಆರೋಪಿಗಳನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ ಎಂದರು. ಇನ್ನು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ರಾಜ್ಯದ ಇಬ್ಬರು ಕಳ್ಳರ ಬಂಧನವಾಗಿದೆ. ಆರೋಪಿತರು ಬಂಗಾರ ತೊಳೆದು ಹೊಳಪು ಬರುವ ಹಾಗೆ ಮಾಡಿಕೊಡುತ್ತೇವೆ ಎಂದು ನಂಬಿಸಿ 1.40 ಲಕ್ಷ ರೂಪಾಯಿ ಮೌಲ್ಯದ 35 ಗ್ರಾಂ ಬಂಗಾರದ ಚೈನ್, 1.80 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ಬಂಗಾರದ ಬಳೆಗಳು, 40 ಸಾವಿರ ಮೌಲ್ಯದ 10 ಗ್ರಾಂ ಬಂಗಾರದ ಚೈನ್, 12 ಸಾವಿರ ಮೌಲ್ಯದ 3 ಗ್ರಾಂ ಬಂಗಾರದ ಉಂಗುರ ಕದ್ದೊಯ್ದಿದ್ದರು. ಈಗ ಆರೋಪಿಗಳಿಂದ 3.72 ಲಕ್ಷ ರೂಪಾಯಿ ಮೌಲ್ಯದ 93 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಿಹಾರದ ಗೋಗಡಿ ತಾಲೂಕಿನ ಗೋವಿಂದಪೂರ ಗ್ರಾಮದ ದೀಪಕ್ ಅಶೋಕ ಗುಪ್ತಾ ಹಾಗೂ ಭಾಗಲಪೂರ ಜಿಲ್ಲೆಯ ತಾಲೂಕಿನ ಜಮುನಿಯಾ ಗ್ರಾಮದ ಬಿಪಿನ್ ಕುಮಾರ ನಂದಕಿಶೋರ ಶಾಹ ಬಂಧಿತರು ಅಂತಾ ಎಸ್‌ಪಿ ನ್ಯಾಮಗೌಡ ಮಾಹಿತಿ ನೀಡಿದರು.


