ಹಾಸನದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಈ ಸಮಾವೇಶ ಕುತೂಹಲಕ್ಕೆ ಕಾರಣವಾಗಿದೆ. ಮೊದಲು ಸಿದ್ದರಾಮಯ್ಯ ಅಭಿಮಾನಿ ಬಳಗದ ‘ಸ್ವಾಭಿಮಾನಿ ಸಮಾವೇಶ’ ಎಂದು ಇದನ್ನು ಕರೆಯಲಾಗಿತ್ತು. ಬಳಿಕ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಇದನ್ನು ‘ಜನಕಲ್ಯಾಣ ಸಮಾವೇಶ’ ಎಂದು ಬದಲಾಯಿಸಿದ್ದಾರೆ. ಇದು ಪಕ್ಷದ ಕಾರ್ಯಕ್ರಮ ಎಂದು ಘೋಷಣೆ ಮಾಡಿದ್ದಾರೆ.ಗುರುವಾರ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ನಾಯಕರ ದಂಡು ಸೇರಲಿದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಮನಗರ ಜಿಲ್ಲೆಯನ್ನು ಜೆಡಿಎಸ್ ಮುಕ್ತ ಮಾಡಿದೆ ಕಾಂಗ್ರೆಸ್. ಈಗ ಏಕೆ ಹಾಸನದಲ್ಲಿ ಸಮಾವೇಶ ಮಾಡಲಾಗುತ್ತಿದೆ?. ಈ ಮೂಲಕ ಜೆಡಿಎಸ್‌ಗೆ ನೀಡಲಿರುವ ಸಂದೇಶ ಏನು? ಎಂಬುದು ಚರ್ಚೆಯ ವಿಚಾರ.
ಎಚ್. ಡಿ. ರೇವಣ್ಣ ಪ್ರತಿಕ್ರಿಯೆ: ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಗುರುವಾರ ಹಾಸನದಲ್ಲಿ ನಡೆಯಲಿರುವ ‘ಜನಕಲ್ಯಾಣ ಸಮಾವೇಶ’ದ ಕುರಿತು ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಮಾಡಲಿ ಜಿಲ್ಲೆಯ ಅಭಿವೃದ್ಧಿ ಮಾಡಲಿ” ಎಂದು ಹೇಳಿದರು.
“ಸಮಾವೇಶದ ಬಗ್ಗೆ ಗಾಬರಿ ಆಗುವ ಸನ್ನಿವೇಶ ಇಲ್ಲ. ಮುಗಿಸುವುದು ದೇವರಿಗೆ ಸಂಬಂಧಪಟ್ಟಿದ್ದು, ವಿಧಾನಸಭೆ ಚುನಾವಣೆ ನಡೆದ ಒಂದೇ ವರ್ಷಕ್ಕೆ ಲೋಕಸಭೆ ಚುನಾವಣೆ ನಡೆಯಿತು, ಏನಾಯಿತು?” ಎಂದು ಎಚ್. ಡಿ. ರೇವಣ್ಣ ಪ್ರಶ್ನೆ ಮಾಡಿದರು. “ನಾವೆಲ್ಲ ಸೋಲು ಗೆಲುವು ನೋಡಿರುವವರು. ಸಮಾವೇಶಕ್ಕೆಲ್ಲ ದೃತಿಗೆಡುವುದಿಲ್ಲ” ಎಂದು ಹೊಳೆನರಸೀಪುರದ ಶಾಸಕರಾದ ಎಚ್. ಡಿ. ರೇವಣ್ಣ ಸ್ಪಷ್ಟಪಡಿಸಿದರು.