ದೆಹಲಿ: ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ರಾಜ್ಯಸಭಾ ಸಂಸದ, ಮಾಜಿ ಕೇಂದ್ರ ಸಚಿವ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಶಿಬು ಸೊರೆನ್ ಅವರು ಸೋಮವಾರ ನಿಧನರಾಗಿದ್ದಾರೆ.
ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜೂನ್ ಕೊನೆಯವಾರದಲ್ಲಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಶ್ರೀ ಶಿಬು ಸೊರೆನ್ ಪುತ್ರ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ತಂದೆ ನಿಧನದ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ, ಶಿಬು ಸೊರೆನ್ ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಎರಡನೆಯ ಅವಧಿ ಮುಂದುವರಿಯುತ್ತಿದೆ.
ಸಂತಾಲ್ ಸಮುದಾಯಕ್ಕೆ ಸೇರಿದ ಶಿಬು ಸೊರೆನ್, ಆಗ ಬಿಹಾರದ ಭಾಗವಾಗಿದ್ದ ರಾಮಗಢ ಜಿಲ್ಲೆಯಲ್ಲಿ ಜನಿಸಿದರು. ಎಡಪಂಥೀಯ ಟ್ರೇಡ್ ಯೂನಿಯನ್ ನಾಯಕ ಎ.ಕೆ. ರಾಯ್ ಮತ್ತು ಕುರ್ಮಿ ಮಹತೋ ನಾಯಕ ಬಿನೋದ್ ಬಿಹಾರಿ ಮಹತೋ ಅವರೊಂದಿಗೆ ಸೇರಿ 1972 ರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾವನ್ನು ಸ್ಥಾಪಿಸಿದರು. ಶಿಬು ಸೊರೆನ್ ರಾಜ್ಯ ಸ್ಥಾಪನಾ ಚಳವಳಿಯ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು, ಇದು 2000 ರಲ್ಲಿ ಜಾರ್ಖಂಡ್ ರಚನೆಗೆ ಕಾರಣವಾಯಿತು.
ಶ್ರೀ ಸೊರೇನ್ ಕೇಂದ್ರ ಸಚಿವರಾಗಿ ಮತ್ತು ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2005 ರಲ್ಲಿ ಮೊದಲ ಬಾರಿಗೆ 10 ದಿನಗಳ ಕಾಲ ಸೇವೆ ಸಲ್ಲಿಸಿದ್ದರೆ ನಂತರ 2008 ರಿಂದ 2009 ರವರೆಗೆ ಎರಡನೇ ಬಾರಿ ಮುಖ್ಯಮಂತ್ರಿಯಾದರೆ, 2009 ರಿಂದ 2010 ರವರೆಗೆ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ್ದರು. ಆದರೆ ಯಾವುದೇ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಇನ್ನು ಶಿಬು ಸೊರನ್ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಧುರೀಣರು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲಾತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶಿಬು ಸೊರೆನ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶ್ರೀ ಶಿಬು ಸೊರೆನ್ ಜಿ ಅವರು ಜನಸಾಮಾನ್ಯರ ಬದುಕಿನಲ್ಲಿ ಅಚಲ ಸಮರ್ಪಣೆಯೊಂದಿಗೆ ಉನ್ನತ ಹುದ್ದೆಗೇರಿದ ತಳಮಟ್ಟದ ನಾಯಕರಾಗಿದ್ದರು. ಬುಡಕಟ್ಟು ಸಮುದಾಯಗಳು, ಬಡವರು ಮತ್ತು ದೀನದಲಿತರ ಸಬಲೀಕರಣದ ಬಗ್ಗೆ ಅವರಿಗೆ ವಿಶೇಷ ಒಲವು ಇತ್ತು. ಅವರ ನಿಧನದಿಂದ ನನಗೆ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನನ್ನ ಆಲೋಚನೆಗಳು ಇವೆ. ಜಾರ್ಖಂಡ್ ಮುಖ್ಯಮಂತ್ರಿ ಶ್ರೀ ಹೇಮಂತ್ ಸೊರೆನ್ ಜಿ ಅವರೊಂದಿಗೆ ಮಾತನಾಡಿ ಸಂತಾಪ ಸೂಚಿಸಿದೆ ಎಂದು ಬರೆದುಕೊಂಡಿದ್ದಾರೆ.


