ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಯಾಂಡಲ್ವುಡ್ ನಟರ ನಟ್ಟು ಬೋಲ್ಟ್ ಟೈಟ್ ಮಾಡುತ್ತೇನೆ ಎಂದಿದ್ದರು. ಅದಾದ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟ್ಟು ಬೋಲ್ಟು ಟೈಟ್ ಮಾಡುವ ಕೆಲಸ ನಡೀತಿದೆ..
ತುಮಕೂರಿನಲ್ಲಿ ತರುಣ್ ಸುಧೀರ್ ಪ್ರೊಡಕ್ಷನ್‌ನಲ್ಲಿ ರಕ್ಷಿತಾ ಸಹೋದರ ರಾಣಾ ನಟಿಸುತ್ತಿದ್ದ ಸಿನಿಮಾಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ.
ಸ್ಯಾಂಡಲ್ವುಡ್ ನಟಿ ರಕ್ಷಿತಾ ಅವರ ಸಹೋದರ ರಾಣಾ ನಟಿಸುತ್ತಿರುವ ಹಾಗೂ ತರುಣ್ ಸುಧೀರ್ ಪ್ರೊಡಕ್ಷನ್ಸ್ನಲ್ಲಿ ನಡೆಯುತ್ತಿದ್ದ ಹೊಸ ಸಿನಿಮಾದ ಶೂಟಿಂಗ್ ಅನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ. ತುಮಕೂರಿನ ಪ್ರಸಿದ್ಧ ನಾಮದ ಚಿಲುಮೆ ಬಳಿ ಕಳೆದ 5 ದಿನದಿಂದ ಶೂಟಿಂಗ್ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ ಹಾಗೂ ಮಹಾನಟಿ ವಿನ್ನರ್ ಪ್ರಿಯಾಂಕಾ ನಟಿಸುತ್ತಿದ್ದರು. ಸುಮಾರು 50-100 ಜನ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಆದರೆ ಈ ಸಿನಿಮಾ ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿಯನ್ನೇ ಪಡೆದಿರಲಿಲ್ಲ.
ಹೀಗಾಗಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದ ಮೇಲೆ ತುಮಕೂರು ಎಸಿಎಫ್ ಪವಿತ್ರಾ ನೇತೃತ್ವದಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಚಿತ್ರೀಕರಣವನ್ನು ಬಂದ್ ಮಾಡಿಸಿದ್ದಲ್ಲದೆ, ಸಿನಿಮಾ ಚಿತ್ರೀಕರಣಕ್ಕೆ ಬಳಸಲಾಗಿರುವ ಕ್ಯಾರವಾನ್, ಕ್ಯಾಮರಾ ಲೈಟ್, ಅಡುಗೆ ಸಾಮಾಗ್ರಿ, ಚೇರ್ಗಳು, ಟೆಂಪೊ ಟ್ರಾವೆಲರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ತಿಂಗಳು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೂರಜ್ ಕುಮಾರ್ ಪತ್ರ ಬರೆದು ಮನವಿ ಕೋರಿದ್ದರಂತೆ. ಆದರೆ ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡದಿದ್ದರೂ ಚಿತ್ರತಂಡ ಮಾತ್ರ ನಾಮದಚಿಲುಮೆಯಲ್ಲಿ ಚಿತ್ರೀಕರಣ ಶುರು ಮಾಡಿತ್ತು. ಇದೇ ಕಾರಣಕ್ಕೆ ಅರಣ್ಯ ಇಲಾಖೆಯವರು ಈಗ ಚಿತ್ರೀಕರಣ ಬಂದ್ ಮಾಡಿಸಿ, ಚಿತ್ರೀಕರಣಕ್ಕೆ ಬಳಸಿದ್ದ ವಸ್ತುಗಳನ್ನು ಸೀಜ್ ಮಾಡಿದ್ದಾರೆ.