ಬೆಂಗಳೂರು: ಎಚ್ಎಂಟಿ ಅರಣ್ಯ ಭೂಮಿ ವಿವಾದ ಪ್ರಕರಣ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ, ಹಾಲಿ ಐಎಫ್ಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಸಂದೀಪ್ ದವೆ, ವಿಜಯಕುಮಾರ್ ಗೋಗಿ, ಸ್ಮಿತಾ ಬಿಜ್ಜೂರ್, ಆರ್ ಗೋಕುಲ್​ಗೆ ಕಾರಣ ಕೇಳಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಈ ಅಧಿಕಾರಿಗಳು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿ ಅರಣ್ಯದ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್​ಗೆ ಅನುಮತಿ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ?

ಐಎಎಸ್ ಅಧಿಕಾರಿಗಳು ಹಾಗೂ ಐಎಫ್ಎಸ್ ಅಧಿಕಾರಿಗಳು ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರ ಜಮೀನು ಅರಣ್ಯದ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್​ಗೆ ಕೋರಿದ್ದರು. ಅರಣ್ಯದ ಸ್ವರೂಪ ಕಳೆದುಕೊಂಡಿದೆ ಎಂಬ ಬಗ್ಗೆ ಕೇವಲ ಅಧಿಕಾರಿಗಳ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಲಾಗಿತ್ತು. ಸುಪ್ರೀಂಕೋರ್ಟ್​ಗೆ ಮೇಲಿನ ಐಎಫ್ಎಸ್ ಅಧಿಕಾರಿಗಳು ಐಎ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಂದಿನ ಅರಣ್ಯ ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ.

ಈ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘಿಸಿ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ಡಿ ನೋಟಿಫೈ ಮಾಡಲು ಐಎ ಸಲ್ಲಿಸಿದ ಅಧಿಕಾರಿಗಳೇ ಕಾರಣ ಎಂದು ಆರೋಪಿಸಲಾಗಿದೆ. ಹೀಗಾಗಿ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಸೆಪ್ಟೆಂಬರ್ 24ರಂದು ಸೂಚನೆ ನೀಡಿದ್ದರು. ಅದರಂತೆ, ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾಗಿರುವ ಸಂದೀಪ್ ದವೆ, ನಿವೃತ್ತ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ ಹಾಗೂ ಹಾಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಐಟಿಸಿ ವಿಭಾಗದ ಸ್ಮಿತಾ ಬಿಜ್ಜೂರ್, ತಾಂತ್ರಿಕ ಕೋಶದ ಆರ್. ಗೋಕುಲ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಅರಣ್ಯ ಭೂಮಿ ಬಗ್ಗೆ ನಿಯಮಗಳಲ್ಲೇನಿದೆ?

ಸುಪ್ರೀಂಕೋರ್ಟ್ ಹೇಳಿರುವಂತೆ ‘Once a forest is always a forest unless it is de-notified’. ಅಂದರೆ ಅನ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಆಗದ ಹೊರತು ಒಮ್ಮೆ ಅರಣ್ಯ ಎಂದು ನಮೂದಾದ ಭೂಮಿ ಎಂದೆಂದಿಗೂ ಅರಣ್ಯವೇ ಆಗಿರುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣಾ ಕಾಯಿದೆ 1980ರಡಿ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ಪರಿಹಾರ ಭೂಮಿ ಒದಗಿಸುವುದರೊಂದಿಗೆ ಎನ್​​ಪಿವಿ ಮೊತ್ತ ಪಾವತಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಹೀಗೆ ಅನುಮತಿ ನೀಡಿದರೂ ಸಹ ಅರಣ್ಯ ಭೂಮಿಯನ್ನು ಗುತ್ತಿಗೆ ಮಾತ್ರ ನೀಡಿ, ಗುತ್ತಿಗೆ ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆಗೆ ಮರಳಿ ಪಡೆಯಬೇಕಾಗುತ್ತದೆ ಎಂದು ನೋಟಿಸ್​​ನಲ್ಲಿ ಪ್ರಸ್ತಾಪಿಸಲಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights