ಉಡುಪಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣ ಸೈಂಟ್ ಮೇರಿಸ್ ದ್ವೀಪದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಹೊಸ ಇತಿಹಾಸ ಬರೆಯಲಾಗಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದ್ವೀಪದಲ್ಲಿ ಧ್ವಜ ಹಾರಿಸಿ, ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು.
ಧ್ವಜಾರೋಹಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಲಾಗಿದೆ. ಈ ಸೌಭಾಗ್ಯ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಇದೊಂದು ರೋಮಾಂಚನಕಾರಿ ಮತ್ತು ಹೆಮ್ಮೆಯ ಅನುಭವ” ಎಂದು ಸಂತಸ ಹಂಚಿಕೊಂಡರು.
ದ್ವೇಷ ಭಾಷಣ ತಡೆ ಮಸೂದೆ ಮತ್ತು ನೋಟಿಸ್ ಜಾರಿ ವಿಚಾರವಾಗಿ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, “ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳುವುದು ಈ ಮಸೂದೆಯ ಮೂಲ ಉದ್ದೇಶ. ಜನರು ಜಾತಿ, ಭಾಷೆ ಅಥವಾ ವ್ಯಕ್ತಿತ್ವದ ಹೆಸರಲ್ಲಿ ಪರಸ್ಪರ ನಿಂದಿಸಿಕೊಳ್ಳಬಾರದು. ಸಂವಿಧಾನದ ಆಶಯದಂತೆ ನಾವು ಈ ಕಾನೂನು ತಂದಿದ್ದೇವೆ. ಕಾಂಗ್ರೆಸ್‌ನವರೇ ದ್ವೇಷ ಭಾಷಣ ಮಾಡಿದರೂ ಅವರ ವಿರುದ್ಧವೂ ಕಾನೂನು ಕ್ರಮ ಜರುಗಲಿದೆ. ಇದು ಯಾವುದೇ ನಿರ್ದಿಷ್ಟ ಪಕ್ಷದ ವಿರುದ್ಧವಲ್ಲ, ಬದಲಿಗೆ ಸಂವಿಧಾನದ ರಕ್ಷಣೆಗಾಗಿ” ಎಂದು ಸ್ಪಷ್ಟಪಡಿಸಿದರು.
ಪರ್ಯಾಯ ಉತ್ಸವದಲ್ಲಿ ಭಗವಾಧ್ವಜ ವಿವಾದಕ್ಕೆ ತೆರೆ
ಉಡುಪಿ ಪರ್ಯಾಯದ ವೇಳೆ ಜಿಲ್ಲಾಧಿಕಾರಿಗಳು ಭಗವಾಧ್ವಜ ಹಾರಿಸಿದ ವಿಚಾರವಾಗಿ ಉಂಟಾಗಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಸಚಿವರು, “ಪರ್ಯಾಯವು ಒಂದು ಪವಿತ್ರ ಧಾರ್ಮಿಕ ಕಾರ್ಯಕ್ರಮ. ಉಡುಪಿಯು ಸಂಸ್ಕೃತಿ ಮತ್ತು ಧಾರ್ಮಿಕತೆಗೆ ಹೆಸರಾದ ಜಿಲ್ಲೆ. ಆ ಘಟನೆಯನ್ನು ಅಲ್ಲಿಗೇ ಬಿಟ್ಟುಬಿಡುವುದು ಸೂಕ್ತ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಯಾರೂ ಮಾಡಬಾರದು. ಅಗತ್ಯವಿದ್ದರೆ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ” ಎಂದರು.


