ರಾಜ್ಯಸುದ್ದಿ

ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೆಎಫ್‌ಡಿ ಸೋಂಕಿನಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಈಗಾಗಲೇ 9 ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಎನ್.ಆರ್. ಪುರ, ಶೃಂಗೇರಿ ಮತ್ತು ಕೊಪ್ಪ ತಾಲೂಕುಗಳಲ್ಲಿ ಪ್ರತಿ ವರ್ಷವೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪತ್ತೆಯಾದ 9 ಪ್ರಕರಣಗಳಲ್ಲಿ 6 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಉಳಿದ ಮೂವರಲ್ಲಿ ಒಬ್ಬರು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಮಣಿಪಾಲ್​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಳೆಹೊನ್ನೂರು ಮತ್ತು ಅರಳಿಕೊಪ್ಪದಂತಹ ಕಾಡಂಚಿನ ಗ್ರಾಮಗಳಲ್ಲಿ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸೋಂಕಿತರ ಚಿಕಿತ್ಸೆಗಾಗಿ ಕೊಪ್ಪ, ಶೃಂಗೇರಿ ಮತ್ತು ಎನ್.ಆರ್. ಪುರ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಭರತ್ ಅವರು ತಿಳಿಸಿರುವಂತೆ, ಕಾಡಿನಲ್ಲಿ ಮಂಗಗಳು ಸಾವನ್ನಪ್ಪಿರುವುದು ಕಂಡು ಬಂದ ತಕ್ಷಣ ವೈರಾಣು ಪರೀಕ್ಷೆ ನಡೆಸಿ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಣಿಪಾಲಿನಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಸೋಂಕಿತರಿಗೂ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ.

ಬೇಸಿಗೆ ಕಾಲವು ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಕಾಫಿ ತೋಟದ ಕಾರ್ಮಿಕರು ಮತ್ತು ಕಾಡಂಚಿನ ನಿವಾಸಿಗಳು ಅನಿವಾರ್ಯವಾಗಿ ಕಾಡಿಗೆ ಅಥವಾ ತೋಟಗಳಿಗೆ ಹೋಗಬೇಕಾಗುತ್ತದೆ. ಮಂಗನ ಕಾಯಿಲೆಯು ಉಣ್ಣೆಗಳ ಮೂಲಕ ಹರಡುವುದರಿಂದ, ತೋಟಗಳಲ್ಲಿ ಕೆಲಸ ಮಾಡುವಾಗ ಈ ವೈರಸ್ ತಗುಲುವ ಭೀತಿ ಕಾರ್ಮಿಕರನ್ನು ಕಾಡುತ್ತಿದೆ.

Comments (0)

Your email address will not be published. Required fields are marked *

Back to top button