ಪ್ರತಿಷ್ಠಿತ ಪ್ರೆಸ್ಟೀಜ್ ಕಂಪನಿಯ ಎಕ್ಸಿಕ್ಯೂಟ್ ಡೈರೆಕ್ಟರ್ ನಯೀಮ್ ನೂರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ದಲಿತರ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ದೌರ್ಜನ್ಯ ನಡೆಸಿದ್ದಾರೆಂದು ಸಂತ್ರಸ್ತರು ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಆರೋಪಿ ನಯೀಮ್ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ FIR ದಾಖಲಾಗಿದೆ..
ಬೇಗೂರು ಗ್ರಾಮದ ಸರ್ವೆ ನಂಬರ್ 352ರಲ್ಲಿರುವ ಪಿತ್ರಾರ್ಜಿತ ಜಮೀನಿನಲ್ಲಿ ದಲಿತರ ಕುಟುಂಬ ಮನೆ ಕಟ್ಟಿಕೊಂಡು ವಾಸವಾಗಿತ್ತು. ಇದೇ ಜಾಗದಲ್ಲಿ ಪೂಜೆಗಾಗಿ ರೇಣುಕಾ ಎಲ್ಲಮ್ಮದೇವಿ ಹಾಗೂ ಮುನೇಶ್ವರ ಸ್ವಾಮಿ ದೇವಾಲಯಗಳನ್ನೂ ಈ ಕುಟುಂಬ ಕಟ್ಟಿಕೊಂಡಿತ್ತು. ಹೀಗಿರುವಾಗ ಇದೇ ಮೇ 28ರ ಮಧ್ಯರಾತ್ರಿ ದಲಿತರ ಕುಟುಂಬವಿದ್ದ ಜಾಗವನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲು ಪ್ರೆಸ್ಟೀಜ್ ವಿಕಸರ್ ಲಿಮಿಟೆಡ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಯೀಮ್ ನೂರ್ ಹಾಗೂ ಮತ್ತೋರ್ವ ಆರೋಪಿ ಹೆಚ್.ಆರ್.ರವೀಂದ್ರ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ. ಅಲ್ಲದೇ ಅದೇ ದಿನ ರಾತ್ರಿ ಸುಮಾರು 400-400 ಮಂದಿ ಗೂಂಡಾಗಳು ಬಂದು ದಲಿತರ ಕುಟುಂಬ ವಾಸವಿದ್ದ ಮನೆ, ಹಾಗೂ ದೇವಾಲಯವನ್ನು ಧ್ವಂಸ ಮಾಡಿಸಿದ್ದಾರೆ ಎಂದು ದಲಿತ ಕುಟುಂಬದ ಮುನಿಸ್ವಾಮಿ ಅವರ ಪುತ್ರ ನಾಗರಾಜ್ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಸದರಿ ಜಾಗದಲ್ಲಿ ದೂರುದಾರ ನಾಗರಾಜು ಅವರ ತಂದೆ ಮುನಿಸ್ವಾಮಿ, ತಮ್ಮ ಯಲ್ಲಪ್ಪ ಹಾಗೂ ಸೋದರ ಸಂಬಂಧಿಗಳಾದ ವರುಣ್, ದೂರುದಾರನ ಅಕ್ಕನ ಮಗ ಇಂದ್ರಜಿತ್ ಸೇರಿ ಹಲವರು ವಾಸವಾಗಿದ್ದರು. ಈ ವೇಳೆ ದಲಿತ ಕುಟುಂಬವನ್ನು ಜಾಗ ಬಿಡಿಸುವ ಸಲುವಾಗಿ 400-500 ಗೂಂಡಾಗಳು ಬಂದು ದೌರ್ಜನ್ಯ ಮಾಡಿದ್ದಾರೆ. ಜೊತೆಗೆ ಯಲ್ಲಪ್ಪ ಹಾಗೂ ವರುಣ್ ಅವರನ್ನೂ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದು, ಕೆಲ ಸಮಯದ ನಂತರ ವಾಪಸ್ ಕರೆದುಕೊಂಡು ಬಂದು ಬಿಟ್ಟಿದ್ದಾರೆ. ಆ ಬಳಿಕ ಜೆಸಿಬಿ, ಪೋಕ್ಲೈನ್ ಯಂತ್ರಗಳ ಮೂಲಕ ದಲಿತ ಸಂತ್ರಸ್ತರ ಮನೆ, ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ, ಮುನೇಶ್ವರ ದೇವಸ್ಥಾನಗಳನ್ನ ಒಡೆದಿದ್ದಾರೆ. ದೇವರ ಮೂರ್ತಿಗಳನ್ನು ಹಾಗೂ ದೇವರ ಅಲಂಕಾರದ ಸುಮಾರು 50 ಗ್ರಾಂ ಬಂಗಾರದ ಒಡವೆಗಳನ್ನೂ, ಮನೆಯಲ್ಲಿದ್ದ ಸಾಮಗ್ರಿಗಳನ್ನೂ ಹೊತ್ತೊಯ್ದಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎಸ್ಸಿ ಎಸ್ಟಿ ಕಾಯ್ದೆಯ ಸೆಕ್ಷನ್ 3(2)(V), 3(1)(G) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 138, 190, 304(2), 310(2), 324(5), 331(4), 351(3), 352ರ ಅಡಿ ರವಿಚಂದ್ರ, ನಯೀಮ್ ನೂರ್ ಸೇರಿ 400ರಿಂದ 500 ಮಂದಿ ಅಪರಿಚಿತರ ವಿರುದ್ಧ ಕೇಸ್ ದಾಖಲಾಗಿದೆ.