Tuesday, January 27, 2026
24 C
Bengaluru
Google search engine
LIVE
ಮನೆರಾಜ್ಯಫೈನಾನ್ಸ್ ಸಿಬ್ಬಂದಿ ಅಮಾನವೀಯತೆ, ಬೀದಿಗೆ ಬಿದ್ದ ವೃದ್ಧ ದಂಪತಿ!

ಫೈನಾನ್ಸ್ ಸಿಬ್ಬಂದಿ ಅಮಾನವೀಯತೆ, ಬೀದಿಗೆ ಬಿದ್ದ ವೃದ್ಧ ದಂಪತಿ!

ಹಾಸನ: ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡಿದ ಸಾಲ ವೃದ್ಧ ದಂಪತಿಗೆ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರ ಅಮಾನವೀಯ ವರ್ತನೆಯಿಂದಾಗಿ, ಕಳೆದ ಒಂದು ವಾರದಿಂದ ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಕರುಣಾಜನಕ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಿರುವ ಆರೋಪ ಕೇಳಿಬಂದಿದೆ.

ಗ್ರಾಮದ ನಿವಾಸಿಗಳಾದ ಸಣ್ಣಯ್ಯ (80) ಮತ್ತು ಜಯಮ್ಮ (75) ದಂಪತಿ ತಮ್ಮ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಹೊಂದಿಸಲಾಗದೆ, 2023ರಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ತಮ್ಮ ಮನೆ ಅಡಮಾನವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಮಗನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂಬ ಅವರ ಆಶಯವೇ ಈಗ ಅವರ ಬದುಕನ್ನು ಬೀದಿಗೆ ತಂದಿದೆ.

ಒಂದು ವರ್ಷದವರೆಗೆ ನಿಯಮಿತವಾಗಿ ಕಂತು ಪಾವತಿಸಿದ್ದ ದಂಪತಿ, ನಂತರ ಎದುರಾದ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಕೆಲವು ಕಂತುಗಳನ್ನು ಕಟ್ಟಲು ವಿಫಲರಾಗಿದ್ದರು. ಸಾಲ ತೀರಿಸುತ್ತೇವೆ, ನಮಗೆ ಸ್ವಲ್ಪ ಸಮಯ ಕೊಡಿ ಎಂದು ವೃದ್ಧರು ಅಂಗಲಾಚಿದರೂ ಕರಗದ ಫೈನಾನ್ಸ್ ಸಿಬ್ಬಂದಿ, ಕೋರ್ಟ್ ಆದೇಶವಿದೆ ಎಂಬ ನೆಪವೊಡ್ಡಿ ಮನೆಗೆ ಬೀಗ ಜಡಿದಿದ್ದಾರೆ. ಕೇವಲ ಮನೆ ಮಾತ್ರವಲ್ಲದೆ, ಇವರ ಜೀವನಾಧಾರವಾಗಿದ್ದ ಜಾನುವಾರುಗಳನ್ನು ಕಟ್ಟುವ ಕೊಟ್ಟಿಗೆಗೂ ಬೀಗ ಹಾಕಿ ವೃದ್ಧರನ್ನು ನಿರ್ದಯವಾಗಿ ಹೊರಹಾಕಲಾಗಿದೆ.

ಸಣ್ಣಯ್ಯ ಮತ್ತು ಜಯಮ್ಮ ದಂಪತಿ ಕಳೆದ ಏಳು ದಿನಗಳಿಂದ ಮನೆಯ ಮುಂಭಾಗದ ರಸ್ತೆಯಲ್ಲೇ ವಾಸಿಸುತ್ತಿದ್ದಾರೆ. ಸಾಲ ವಸೂಲಿ ಮಾಡುವುದು ಅವರ ಹಕ್ಕು ನಿಜ, ಆದರೆ ವೃದ್ಧರನ್ನು ಬೀದಿಗೆ ತಳ್ಳುವುದು ಯಾವ ನ್ಯಾಯ? ಎಂದು ಗ್ರಾಮಸ್ಥರು ಮತ್ತು ಸ್ಥಳೀಯ ಸಂಘಟನೆಗಳು ಫೈನಾನ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಸಾಲ ಮರುಪಾವತಿಗೆ ಸಮಯಾವಕಾಶ ನೀಡಬೇಕೆಂದು ದಂಪತಿಗಳು ಈಗ ಸರ್ಕಾರ ಮತ್ತು ದಾನಿಗಳ ಮೊರೆ ಹೋಗಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments