ಜೈಲರ್ ಮ್ಯೂಸಿಕ್ ಬಳಸಿದ್ದಕ್ಕೆ 1 ಕೋಟಿ ದಂಡದ ಭೀತಿ!

ಐಪಿಎಲ್ 2026ರ ಸಂಭ್ರಮ ಆರಂಭವಾಗುವ ಮುನ್ನವೇ ದಕ್ಷಿಣ ಭಾರತದ ಇಬ್ಬರು ದೈತ್ಯರ ನಡುವೆ ಕಾನೂನು ಸಮರ ಏರ್ಪಟ್ಟಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ರಜನೀಕಾಂತ್ ನಟನೆಯ ಹಿಟ್ ಚಿತ್ರಗಳಾದ ‘ಜೈಲರ್’, ‘ಜೈಲರ್ 2’ ಮತ್ತು ‘ಕೂಲಿ’ ಚಿತ್ರಗಳ ಸಂಗೀತ ಹಾಗೂ ಸಂಭಾಷಣೆಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಪ್ರಚಾರದ ವಿಡಿಯೋಗಳಲ್ಲಿ ಅನುಮತಿಯಿಲ್ಲದೆ ಬಳಸಿಕೊಂಡಿರುವುದು ಈ ವಿವಾದಕ್ಕೆ ಕಾರಣವಾಗಿದೆ. ಮಾರ್ಚ್ 1ರಂದು ಸಿಎಸ್ಕೆ ತನ್ನ ಹೊಸ ಜರ್ಸಿ ಬಿಡುಗಡೆಯ ಪ್ರಮೋಷನಲ್ ವಿಡಿಯೋದಲ್ಲಿ ಈ ಹಾಡುಗಳನ್ನು ಬಳಸಿದ್ದು, ಇದುCopyright ನೇರ ಉಲ್ಲಂಘನೆ ಎಂದು ಸನ್ ಪಿಕ್ಚರ್ಸ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ವಿಶೇಷವಾಗಿ ಎಂಎಸ್ ಧೋನಿ ಅವರ ಎಂಟ್ರಿ ಮತ್ತು ಜರ್ಸಿ ಅನಾವರಣದ ದೃಶ್ಯಗಳಲ್ಲಿ ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಸಂಗೀತವನ್ನು ಬಳಸುವ ಮೂಲಕ ಸಿಎಸ್ಕೆ ತನ್ನ ವಾಣಿಜ್ಯ ಲಾಭಕ್ಕಾಗಿ ಶ್ರಮಿಸಿದೆ ಎಂದು ಸನ್ ಪಿಕ್ಚರ್ಸ್ ವಾದಿಸಿದೆ. ಈ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಸನ್ ನೆಟ್ವರ್ಕ್ ಸಂಸ್ಥೆಯು ಸಿಎಸ್ಕೆ ತಂಡದಿಂದ 1 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. ಅಲ್ಲದೆ, ಸನ್ ಪಿಕ್ಚರ್ಸ್ ಒಡೆತನದ ಯಾವುದೇ ಚಿತ್ರದ ಸಂಗೀತ ಅಥವಾ ಸಂಭಾಷಣೆಯನ್ನು ಸಿಎಸ್ಕೆ ಇನ್ನು ಮುಂದೆ ಬಳಸದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೆಂಥಿಲ್ಕುಮಾರ್ ರಾಮಮೂರ್ತಿ ಅವರ ಮುಂದೆ ಸಿಎಸ್ಕೆ ಪರ ವಕೀಲರು ಹಾಜರಾಗಿ, ಈಗಾಗಲೇ ವಿವಾದಿತ ವಿಡಿಯೋಗಳನ್ನು ಅಧಿಕೃತ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸನ್ ಪಿಕ್ಚರ್ಸ್ನ ಪೂರ್ವಾನುಮತಿ ಅಥವಾ ಪರವಾನಗಿ ಪಡೆಯದೆ ಯಾವುದೇ ಸಂಗೀತವನ್ನು ಬಳಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಸಿಎಸ್ಕೆ ತಂಡಕ್ಕೆ ಅಧಿಕೃತ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ.
ಈ ವಿವಾದವು ಕೇವಲ ಸಿನಿಮಾ ಮತ್ತು ಕ್ರಿಕೆಟ್ನ ನಡುವಿನ ಸಂಘರ್ಷವಾಗಿ ಉಳಿಯದೆ, ಐಪಿಎಲ್ ಅಂಗಳದ ವೈರಿಗಳಾದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಶೀತಲ ಸಮರವಾಗಿಯೂ ಬಿಂಬಿತವಾಗುತ್ತಿದೆ. ಸನ್ ಪಿಕ್ಚರ್ಸ್ ಮಾಲೀಕರಾದ ಕಾವ್ಯಾ ಮಾರನ್ ಅವರು ಎಸ್ಆರ್ಎಚ್ ತಂಡದ ಮಾಲೀಕರೂ ಆಗಿರುವುದರಿಂದ, ಈ ಕಾನೂನು ಹೋರಾಟವು ಐಪಿಎಲ್ 2026ರ ಸೀಸನ್ಗೆ ಹೊಸದೊಂದು ರಂಗು ನೀಡಿದೆ. ಮೈದಾನದ ಹೊರಗೆ ನಡೆಯುತ್ತಿರುವ ಈ ಹೈವೋಲ್ಟೇಜ್ ಡ್ರಾಮಾ ಕ್ರೀಡಾ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.




