ಪಣಜಿ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ನ್ಯೂ ಟೌನ್ ಠಾಣೆಯ ಪೊಲೀಸರು ಗೋವಾದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಪ್ರದೀಪ್ ಅಲಿಯಾಸ್ ಪಾಯಿಸಿನ್ ಪ್ರದೀಪ್ ಬಂಧಿತ ಆರೋಪಿ. ವಂಚನೆಗೆ ಸಂಬಂಧಿಸಿದಂತೆ ಇಬ್ಬರ ದೂರನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಗೋವಾದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದರು.
ವಿದ್ಯಾರಣ್ಯಪುರ, ಯಲಹಂಕ, ನ್ಯೂ ಟೌನ್ ಸೇರಿದಂತೆ ಹಲವು ಕಡೆಯ ನಿವಾಸಿಗಳಿಗೆ ಆರೋಪಿ ವಂಚಿಸಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಬೇರೆಯವರ ನಿವೇಶನಕ್ಕೆ ಆರೋಪಿಯು ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ನಂತರ ತನ್ನದೇ ನಿವೇಶನ ಎಂಬುದಾಗಿ ನಂಬಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಪ್ರದೀಪ ರೌಡಿಶೀಟರ್ ಆಟೋ ರಾಮನ ಶಿಷ್ಯ. ಆಟೋ ರಾಮನ ಜೊತೆಗೆ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿದ್ದ ಹಾಗೂ ಸರ್ಕಾರಿ ಅಧಿಕಾರಿಗಳನ್ನೇ ಹುಡುಕಿ ಮಾರಾಟ ಮಾಡುತ್ತಿದ್ದನಂತೆ. ಈ ರೀತಿ ದಂಧೆ ನಡೆಸಿ ಆರೋಪಿಯು ಕೋಟ್ಯಾಂತರ ರೂ. ಗಳಿಸಿರುವುದು ತನಿಖೆಯಿಂದ ಪತ್ತೆಯಾಗಿದೆ. ಕಾನ್‌ಸ್ಟೇಬಲ್, ಪೊಲೀಸ್ ಅಧಿಕಾರಿಗಳಿಗೂ ಆರೋಪಿ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಇಬ್ಬರು ಮಾತ್ರ ದೂರು ನೀಡಿದ್ದಾರೆ. ವಂಚನೆಗೆ ಒಳಗಾದ ಬಗ್ಗೆ ಯಾವುದೇ ಪೊಲೀಸ್ ಸಿಬ್ಬಂದಿ ದೂರು ನೀಡಿಲ್ಲ. ದೂರು ನೀಡಿದರೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.