ಎಫ್.ಆರ್.ಎ. ಅರ್ಜಿ ಬಾಕಿ ಇದ್ದರೆ; ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ತೆರವಿಲ್ಲ
2015ರ ನಂತರದ ಮತ್ತು ದೊಡ್ಡ ಅರಣ್ಯ ಒತ್ತುವರಿ ಮಾತ್ರ ತೆರವು: ಈಶ್ವರ ಖಂಡ್ರೆ ಸ್ಪಷ್ಟನೆ
ಬೆಂಗಳೂರು, ಆ.27: ಅರಣ್ಯ ಒತ್ತುವರಿ ತೆರವು ಕಾನೂನು ಪ್ರಕ್ರಿಯೆಯಾಗಿದ್ದು, ದೊಡ್ಡ ಮತ್ತು 2015ರ ನಂತರದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಿಸಲಾಗುತ್ತಿದೆ. ಮುಗ್ದ ಜನರು ಯಾವುದೇ ವದಂತಿಗಳಿಗೆ ಮರುಳಾಗಬಾರದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವರು ಅರಣ್ಯ ಒತ್ತುವರಿ ತೆರವಿಗೆ ವಿರೋಧಿಸುತ್ತಿದ್ದು, ಈ ವಿಚಾರದಲ್ಲಿ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ಬಡವರ ಭೂಮಿ ಒತ್ತುವರಿ ತೆರವು ಮಾಡಿಸುತ್ತಿಲ್ಲ ಬದಲಾಗಿ ದೊಡ್ಡ ಒತ್ತುವರಿ ಮತ್ತು 2015ರ ನಂತರದ ಒತ್ತುವರಿಯನ್ನು ಮಾತ್ರ ತೆರವು ಮಾಡಲು ಸೂಚಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಶಿರೂರಿನಲ್ಲಿ ಗುಡ್ಡ ಕುಸಿದು 11 ಜನರು ಸಾವಿಗೀಡಾಗಿದ್ದರೆ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 316ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಎರಡು ಘಟನೆಗಳು ಎಚ್ಚರಿಕೆಯ ಗಂಟೆಯಾಗಿದ್ದು, ನದಿಗಳ ಮೂಲ ಮತ್ತು ಜೀವವೈವಿಧ್ಯದ ತಾಣವಾದ ಪಶ್ಚಿಮ ಘಟ್ಟ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಸಮಾಜ ಪರಿವರ್ತನ ಸಮುದಾಯ ಮತ್ತು ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಖ್ಯೆ ಡಬ್ಲ್ಯುಪಿ.ನಂ. 15511-14/ 2013 ಮತ್ತು ಡಬ್ಲ್ಯು.ಪಿ. ನಂ. 15500/2013ರಲ್ಲಿ ಕರ್ನಾಟಕ ಹೈಕೋರ್ಟ್ ಅರಣ್ಯ ಒತ್ತುವರಿ ತೆರವಿಗೆ ಆದೇಶ ನೀಡಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅರಣ್ಯ ಹಕ್ಕು ನೀಡಲು ಕ್ರಮ:
ರಾಜ್ಯ ಸರ್ಕಾರ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಸಿರುವ ಅರ್ಜಿಗಳ ಪುನರ್ ಪರಿಶೀಲನೆ ಪ್ರಕ್ರಿಯೆ ಪೂರ್ಣವಾಗುವವರೆಗೆ ಒತ್ತುವರಿ ತೆರವು ಮಾಡದಂತೆ ಸೂಚಿಸಿದೆ, ಜೊತೆಗೆ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟು ಸಮುದಾಯದವರಿಗೆ ಸಮಾನವಾಗಿ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನೂ ಪರಿಗಣಿಸುವ ಸಲುವಾಗಿ ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ 2006 ಮತ್ತು ಅದರಡಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗೆ ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ.
2015ರವರೆಗೆ ಅರಣ್ಯ ಒತ್ತುವರಿ:
2015ರಲ್ಲಿ ಸರ್ಕಾರದ ನಡಾವಳಿಯಲ್ಲಿ 30 ಎಕರೆಗೂ ಹೆಚ್ಚು ಒತ್ತುವರಿಯ 133 ಪ್ರಕರಣಗಳಿದ್ದು, ಒತ್ತುವರಿ ಒಟ್ಟು ವಿಸ್ತೀರ್ಣ 5344.33 ಎಕರೆಯಾದರೆ, 10ರಿಂದ 30 ಎಕರೆವರೆಗಿನ ಒತ್ತುವರಿಯ 718 ಪ್ರಕರಣವಿದ್ದು 12898 ಎಕರೆ ಅರಣ್ಯ ಒತ್ತುವರಿ ಮಾಡಲಾಗಿದೆ. 3ರಿಂದ 10 ಎಕರೆವರೆಗಿನ ಒತ್ತುವರಿಯ 23423 ಪ್ರಕರಣವಿದ್ದು ಇದರ ಒತ್ತುವರಿ ಪ್ರದೇಶ 71108 ಎಕರೆಯಾಗಿದೆ ಎಂದು ತಿಳಿಸಲಾಗಿದೆ.
3 ಎಕರೆಗಿಂತ ಕಡಿಮೆ ವಿಸ್ತೀರ್ಣದ ಒತ್ತುವರಿಯ 86352 ಪ್ರಕರಣಗಳಿದ್ದು, 1150089.25ಎಕರೆ ಭೂಮಿ ಒತ್ತುವರಿಯಾಗಿದೆ. ಇದು 14ನೇ ವಿಭಾನಸಭೆಯ 6ನೇ ಅಧಿವೇಶದಲ್ಲಿ ಚರ್ಚಿತವಾಗಿದ್ದು, 1996ರಲ್ಲಿ ಕೇಂದ್ರ ಸರ್ಕಾರದ ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ ಅರಣ್ಯಹಕ್ಕು ಕಾಯಿದೆ ಅಡಿ ಕೆಲವು ಅರ್ಹ ಒತ್ತುವರಿದಾರರ ಪ್ರಕರಣ ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದ್ದು, ಮೂರು ಎಕರೆಗಿಂತ ಕಡಿಮೆ (ಒತ್ತುವರಿ ಮತ್ತು ಆ ವ್ಯಕ್ತಿಯ ಪಟ್ಟಾಭೂಮಿ ಸೇರಿ) ಒತ್ತುವರಿ ಆಗಿದ್ದಲ್ಲಿ ಜೀವನೋಪಾಯಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಲು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿಯಲ್ಲಿ ಭಾರತ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.
2015ರಲ್ಲಿ ಹೈಕೋರ್ಟ್ ಗೆ 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, 2015ರ ನಂತರ ಅರಣ್ಯ ಒತ್ತುವರಿ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಬೇಕಾಗುತ್ತದೆ. ಹೀಗಾಗಿ ತಾವು ದಿ.6.8.24ರಂದು ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಕಳಿಸಿರುವ ಟಿಪ್ಪಣಿಯಲ್ಲಿ 2015ರ ನಂತರ ಪಶ್ಚಿಮ ಘಟ್ಟ ಮತ್ತು ಇತರ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ರೆಸಾರ್ಟ್, ಹೋಂಸ್ಟೇ, ತೋಟ, ಬಡಾವಣೆ ತೆರವು ಮಾಡಲು ಸೂಚಿಸಲಾಗಿದೆ. ನಿರಂತರ ಒತ್ತುವರಿಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ ಇದೆ ಎಂದು ಈಶ್ವರಖಂಡ್ರೆ ಪ್ರತಿಪಾದಿಸಿದ್ದಾರೆ.
ಅದೇ ರೀತಿ 2015ರ ನಂತರ ಅರಣ್ಯ ಒತ್ತುವರಿ ಮಾಡಿರುವ ವಲಯವಾರು ಮಾಹಿತಿ ಕೇಳಲಾಗಿದೆ. 64 ಎ ಪ್ರಕ್ರಿಯೆ ಪೂರ್ಣಗೊಂಡು ಆದೇಶ ಆಗಿರುವ, ನ್ಯಾಯಾಲಯಗಳಲ್ಲಿ ತಡೆ ಇಲ್ಲದ ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿ ಪರಿಗಣನೆಗೆ ಅರ್ಜಿ ಬಾಕಿ ಇಲ್ಲದ ಪ್ರಕರಣಗಳಲ್ಲಿ ಮಾತ್ರವೇ ಒತ್ತುವರಿ ತೆರವು ಮಾಡಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಅರಣ್ಯಾಧಿಕಾರಿಗಳಿಗೆ ಸೂಚನೆ:
2015ಕ್ಕೆ ಮೊದಲು ಜೀವನೋಪಾಯಕ್ಕಾಗಿ ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವವರಿಗೆ ತೊಂದರೆ ನೀಡದಂತೆ, ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಇತ್ಯರ್ಥ ಆಗದೆ ಬಾಕಿ ಉಳಿದಿದ್ದಲ್ಲಿ ಅಂತಹ ಜಮೀನು, ಮನೆಯನ್ನು ತೆರವು ಮಾಡಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

Verified by MonsterInsights
Did you find this content engaging?