ಮುಂಬೈ: ಬಾಲಿವುಡ್‌ನ ಸಿನಿಮಾ ವಿಮರ್ಶಕ ಮತ್ತು ನಟ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್‌ಕೆ ಅವರನ್ನು ಮುಂಬೈನ ಓಶಿವಾರಾ ಪೊಲೀಸರು ಬಂಧಿಸಿದ್ದಾರೆ. ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್‌ಕೆ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.
ಜನವರಿ 18 ರಂದು ಅಂಧೇರಿಯ ಓಶಿವಾರಾದಲ್ಲಿರುವ ‘ನಳಂದ ಸೊಸೈಟಿ’ಯ ಮೇಲೆ ಎರಡು ಸುತ್ತು ಗುಂಡು ಹಾರಿಸಲಾಗಿತ್ತು. ಒಂದು ಗುಂಡು ಎರಡನೇ ಮಹಡಿಯಲ್ಲಿದ್ದ ಬರಹಗಾರ-ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ ಅವರ ಫ್ಲಾಟ್‌ನಲ್ಲಿ ಪತ್ತೆಯಾದರೆ, ಮತ್ತೊಂದು ನಾಲ್ಕನೇ ಮಹಡಿಯ ಮಾಡೆಲ್ ಪ್ರತೀಕ್ ಬೈದ್ ಅವರ ಫ್ಲಾಟ್‌ನಲ್ಲಿ ಕಂಡುಬಂದಿತ್ತು.
ಆರಂಭದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಕೊರತೆಯಿಂದಾಗಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ವಿಧಿವಿಜ್ಞಾನ ತಂಡದ ನೆರವಿನಿಂದ ತನಿಖೆ ನಡೆಸಿದಾಗ, ಆ ಗುಂಡುಗಳು ಕೆಆರ್‌ಕೆ ಅವರ ಪರವಾನಗಿ ಪಡೆದ ಬಂದೂಕಿನಿಂದಲೇ ಹಾರಿಸಲಾಗಿದೆ ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.
ಬಂಧನದ ನಂತರ ಪೊಲೀಸರ ವಿಚಾರಣೆಯಲ್ಲಿ ಕೆಆರ್‌ಕೆ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ತಾವು ಗುಂಡು ಹಾರಿಸಿರುವುದು ನಿಜ ಎಂದು ಒಪ್ಪಿಕೊಂಡಿರುವ ಕೆಆರ್‌ಕೆ, ತಮ್ಮ ಪರವಾನಗಿ ಪಡೆದ ಬಂದೂಕನ್ನೇ ಬಳಸಿರುವುದಾಗಿ ತಿಳಿಸಿದ್ದಾರೆ. ಯಾರಿಗೂ ಹಾನಿ ಮಾಡುವ ಉದ್ದೇಶ ನನಗಿರಲಿಲ್ಲ” ಎಂದು ಅವರು ಪೊಲೀಸರ ಮುಂದೆ ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕೆಆರ್‌ಕೆ ಅವರ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.


