ಪಶ್ಚಿಮ ಏಷ್ಯಾದಲ್ಲಿ ಬಾಂಬ್‌ಗಳಿಗಿಂತ ಭೀಕರವಾಗುತ್ತಿದೆ ಸಾಂಕ್ರಾಮಿಕ ರೋಗಗಳ ಹಾವಳಿ!

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿರುವ ಸಂಘರ್ಷವು ಕೇವಲ ಯುದ್ಧಕ್ಕೆ ಸೀಮಿತವಾಗದೆ, ಬೃಹತ್ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿ ಮಾರ್ಪಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಇರಾನ್ ಸೇರಿದಂತೆ ಹಲವು ಭಾಗಗಳಲ್ಲಿ ಕ್ಷಿಪಣಿ ದಾಳಿ ಮತ್ತು ಬಾಂಬ್ ಸ್ಫೋಟಗಳಿಂದ ಉಂಟಾಗುತ್ತಿರುವ ಗಂಭೀರ ಗಾಯಗಳು ಆಸ್ಪತ್ರೆಗಳನ್ನು ಹೈರಾಣಾಗಿಸಿವೆ. ಶಸ್ತ್ರಚಿಕಿತ್ಸಾ ಉಪಕರಣಗಳ ಕೊರತೆ ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲಿನ ಒತ್ತಡ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಇರಾನ್‌ನಲ್ಲಿ ಸುಮಾರು ೧,೩೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯,೦೦೦ಕ್ಕೂ ಹೆಚ್ಚು ಗಾಯಾಳುಗಳು ದಾಖಲಾಗಿದ್ದಾರೆ.

ಯುದ್ಧದ ಭೀಕರತೆಯಿಂದಾಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಇದು ಹೆರಿಗೆ ಸೇವೆ, ಲಸಿಕೆ ಕಾರ್ಯಕ್ರಮ ಮತ್ತು ತುರ್ತು ಚಿಕಿತ್ಸೆಗೆ ದೊಡ್ಡ ಅಡ್ಡಿಯಾಗಿದೆ. ಲೆಬನಾನ್ ಮತ್ತು ಇರಾನ್‌ನ ನಿರಾಶ್ರಿತರ ಶಿಬಿರಗಳಲ್ಲಿ ಲಕ್ಷಾಂತರ ಜನರು ಆಶ್ರಯ ಪಡೆಯುತ್ತಿದ್ದಾರೆ. ಈ ಜನಸಂದಣಿಯ ಶಿಬಿರಗಳಲ್ಲಿ ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆಯಿಂದಾಗಿ ಕಾಲರಾ, ದಡಾರ ಮತ್ತು ತೀವ್ರ ಉಸಿರಾಟದ ಸೋಂಕುಗಳಂತಹ ಸಾಂಕ್ರಾಮಿಕ ರೋಗಗಳು ವೇಗವಾಗಿ ಹರಡುತ್ತಿವೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಪ್ರಕಾರ, ಸಾಂಕ್ರಾಮಿಕ ರೋಗಗಳಿಂದ ಸಂಭವಿಸುವ ಸಾವುಗಳು ಯುದ್ಧದ ಸಾವುಗಳಿಗಿಂತ ಹೆಚ್ಚಾಗುವ ಅಪಾಯವಿದೆ.
ಪರಿಸರದ ಮೇಲಾಗುತ್ತಿರುವ ಪರಿಣಾಮಗಳು ಮತ್ತೊಂದು ಆತಂಕಕಾರಿ ವಿಷಯವಾಗಿದೆ. ಇರಾನ್‌ನ ತೈಲ ಸಂಗ್ರಹಾಗಾರಗಳ ಮೇಲಿನ ದಾಳಿಯಿಂದ ಉಂಟಾಗುತ್ತಿರುವ ‘ಕಪ್ಪು ಮಳೆ’ ಮತ್ತು ವಿಷಕಾರಿ ಹೊಗೆಯು ಜನರ ಶ್ವಾಸಕೋಶ ಹಾಗೂ ಚರ್ಮದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಮಳೆಯಲ್ಲಿರುವ ಸಲ್ಫರ್ ಡೈಆಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳು ರಾಸಾಯನಿಕ ಸುಟ್ಟ ಗಾಯಗಳನ್ನು ಉಂಟುಮಾಡಬಹುದು ಮತ್ತು ಅಂತರ್ಜಲವನ್ನು ವಿಷಪೂರಿತಗೊಳಿಸುತ್ತಿವೆ. ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ ಮತ್ತು ಕ್ಯಾನ್ಸರ್ ಇರುವ ರೋಗಿಗಳಿಗೆ ಇನ್ಸುಲಿನ್ ಹಾಗೂ ಅಗತ್ಯ ಔಷಧಗಳ ಪೂರೈಕೆ ಸ್ಥಗಿತಗೊಂಡಿರುವುದು ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ.
ಈ ಎಲ್ಲ ಸಮಸ್ಯೆಗಳ ಜೊತೆಗೆ, ಮಕ್ಕಳ ಮೇಲೆ ಉಂಟಾಗುತ್ತಿರುವ ಮಾನಸಿಕ ಹಾನಿ ಅಪಾರವಾಗಿದೆ. ಯುನಿಸೆಫ್ ವರದಿ ಪ್ರಕಾರ , ಸುಮಾರು ೧,೧೦೦ಕ್ಕೂ ಹೆಚ್ಚು ಮಕ್ಕಳು ಈ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ನಿರಂತರ ಬಾಂಬ್ ದಾಳಿ ಮತ್ತು ಸಾವುಗಳನ್ನು ಕಣ್ಣಾರೆ ಕಾಣುತ್ತಿರುವ ಮಕ್ಕಳಲ್ಲಿ ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಮತ್ತು ತೀವ್ರ ಆತಂಕದ ಲಕ್ಷಣಗಳು ಕಂಡುಬರುತ್ತಿವೆ. ಇದು ಮುಂದಿನ ತಲೆಮಾರಿನ ಮಾನಸಿಕ ಸ್ಥಿರತೆಯ ಮೇಲೆ ದೀರ್ಘಕಾಲದ ದುಷ್ಪರಿಣಾಮ ಬೀರಲಿದೆ.




