ಮೈಸೂರು: ಕಾಲೇಜಿನ ಉಪನ್ಯಾಸಕ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬೆಳಕಿಗೆ ಬಂದಿದ್ದು, ಉಪನ್ಯಾಸಕನ ವಿರುದ್ಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಉಪನ್ಯಾಸಕ ಭರತ್ ಭಾರ್ಗವ ಅವರು ಅದೇ ಕಾಲೇಜಿನಲ್ಲಿ ಓದುತ್ತಿದ್ದ ಓರ್ವ ವಿದ್ಯಾರ್ಥಿನಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ BNS ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಭರತ್ ಭಾರ್ಗವ ಅದೇ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೆಚ್ಚು ಮಾರ್ಕ್ಸ್ ಕೊಡುತ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ, ಹೊರಗೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ಕರೆಯುತ್ತಿದ್ದರಂತೆ.
ಇದಲ್ಲದೆ, ಖಾಸಗಿ ಅಂಗಗಳ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿನಿ ತಾನು ಹೇಳಿದಂತೆ ಕೇಳದಿದ್ದರೆ ಇಂಟರ್ನಲ್ ಮಾರ್ಕ್ಸ್‌ನಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೇ ಭರತ್‌ನ ಅಸಭ್ಯ ವರ್ತನೆ ಬಗ್ಗೆ ಮಹಿಳಾ ಉಪನ್ಯಾಸಕರಿಗೆ ದೂರು ನೀಡಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಖಾಸಗಿ ಅಂಗಗಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾನೆ.
ತಾನು ಹೇಳಿದಂತೆ ಕೇಳದಿದ್ರೆ ಫೇಲ್ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಉಪನ್ಯಾಸಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದು, ಕಾಮುಕ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


