Editorial

ಸಂಪಾದಕೀಯ..

ಹುದ್ದೆಗಳ ಸೇಲ್ ಕಾಲದಲ್ಲಿ ಆಡಳಿತಕ್ಕೆ ವಕ್ಕರಿಸಿದ ಅಧಿಕಾರಿಗಳ ಪಾಪ ಕೃತ್ಯದಿಂದ ಇಡೀ ರಾಜ್ಯವೇ ನರಳುತ್ತಿದೆ. ಯಾವುದೇ ಸೇವೆ ಸಿಗದ ಜನಸಾಮಾನ್ಯರದ್ದು ನರಕವೂ ಇಲ್ಲದ ಸ್ವರ್ಗವೂ ಇಲ್ಲದ ತ್ರಿಶಂಕು ಸ್ಥಿತಿ. ಸ್ವತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಜನರ ಜಮೀನು ಅವರ ಹೆಸರಿಗೆ ಆಗಿಲ್ಲ. ಲಂಚ ಕೊಡದೆ ಹುಲ್ಲುಕಡ್ಡಿಯೂ ಅಲುಗಲ್ಲ. ಗವರ್ನಮೆಂಟ್ ಜಾಬ್ ಬಿಟ್ರೆ ಯಾವುದೇ ಬಿಸಿನೆಸ್ ಮಾಡಿದರೂ ವೇಸ್ಟ್. ಕೃಷಿ ಮಾಡಿದರೂ ಬೆಳೆಯಲ್ಲ, ಉದ್ಯಮ ಕಟ್ಟಿದರೂ ಬೆಳೆಯೋಕಾಗಲ್ಲ. ಇದಕ್ಕೆ ಪ್ರಮುಖ ಅಡ್ಡಿಯೇ ಅಧಿಕಾರಶಾಹಿ. ಅಧಿಕಾರಶಾಹಿಯ ಕಬಂಧಬಾಹುಗಳು ಕಾನೂನುಗಳನ್ನು ಮೀರಿ ದೇಶವಾಸಿಗಳನ್ನು ಶೋಷಿಸಲು ನಿಂತಿವೆ. ನ್ಯಾಯಾಂಗ, ಶಾಸಕಾಂಗ ಮತ್ತು ಬ್ಯೂರೋಕ್ರಸಿಯ ಕೆಲ ಸುಧಾರಕರು ಎಷ್ಟೇ ಯತ್ನಪಟ್ಟರೂ ಭ್ರಷ್ಟರ ಕೋಟೆ ಭೇದಿಸಲು ಅಸಾಧ್ಯ ಎನ್ನುವಂತಾಗಿದೆ.

ಇಂಥದ್ದೇ ಭ್ರಷ್ಟ ಕೂಟವೊಂದು ಬಿಡಿಎಯಲ್ಲಿ ಎಸಗಿರುವ ಮಹಾ ಹಗರಣವೊಂದು ಇದೀಗ ಚರ್ಚೆಯಲ್ಲಿದೆ. ಬಿಡಿಎಯನ್ನು ಜನಪರವಾಗಿಸಲು ಡಿಕೆ ಶಿವಕುಮಾರ್ ಅವರು ಆಯುಕ್ತ ಮಣಿವಣ್ಣನ್ ಅವರ ಮೂಲಕ ಪ್ರಯತ್ನ ಮಾಡುತ್ತಿದ್ದರೆ, ಇತ್ತ ಭ್ರಷ್ಟ ಅಧಿಕಾರಿಗಳು ತಾವೇ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರೋದು ಬಯಲಾಗಿದೆ.ಎಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳು ಬಿಡಿಎ ನಿರ್ಮಾಣ ಮಾಡುತ್ತಿರುವ ಬಡಾವಣೆಗಳಲ್ಲಿ ರೈತರ ಜಮೀನನ್ನು ತಾವೇ ಬೇನಾಮಿಯಾಗಿ ಖರೀದಿಸಿ ಪರಿಹಾರ ಪಡೆಯಲು ಮುಂದಾಗಿದ್ದಾರೆ. ತಮ್ಮ ನೆಂಟರು, ಸ್ನೇಹಿತರು, ಕಡೆಗೆ ಅವರವರ ಪ್ರೇಯಸಿಯರ ಹೆಸರಲ್ಲೂ ಬೇನಾಮಿ ಹೂಡಿಕೆ ಮಾಡಿದ್ದಾರೆ. ಪರಿಹಾರ ಕೇಳಿ ಬರುವ ರೈತರಿಂದಲೇ ಜಿಪಿಎ, ಕ್ರಯದ ಕರಾರು ಒಪ್ಪಂದ ಮಾಡಿಕೊಂಡು ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಕಮಾಯಿಸಿದ ಬ್ಲಾಕ್ ಮನಿಯನ್ನು ಎಸ್ಆರ್ ರೇಟ್ನಲ್ಲಿ ಬ್ಯಾಂಕ್ ಅಕೌಂಟ್ ಮೂಲಕ ಮತ್ತು ಉಳಿದ್ದನ್ನು ಕ್ಯಾಶ್ ಮೂಲಕ‌ ಇನ್ವೆಸ್ಟ್ ಮಾಡಿ ನೂರಾರು ಕೋಟಿ ವೈಟ್ ಮನಿ ಮಾಡಿಕೊಳ್ಳುವತ್ತ ದಾಪುಗಾಲಿಡುತ್ತಿದ್ದಾರೆ. ಅಮಾಯಕ ರೈತರಿಂದ ಭೂಮಿ ಬರೆಸಿಕೊಳ್ಳುವ ನೀಚರು ತಿಂದ ತಟ್ಟೆಯಲ್ಲಿ ಶೌಚ ಮಾಡುವ ದುಷ್ಕೃತ್ಯಕ್ಕೆ ಇಳಿದಿದ್ದಾರೆ.

ಹೇಗೋ ಇವರ ದಂಧೆ ಡಿಸಿಎಂ ಡಿಕೆ ಶಿವಕುಮಾರ್ಗೆ ಗೊತ್ತಾಗಿದೆ. ಇಂಥ ದಂಧೆಕೋರರ ಆಟವನ್ನು ದಶಕಗಳಿಂದ ಬಲ್ಲ ಡಿಸಿಎಂ, ಬೇನಾಮಿ ಲ್ಯಾಂಡ್ ಡೀಲಿಂಗ್ ನಡೆಸುತ್ತಿದ್ದ ಅಧಿಕಾರಿಗಳ ಪಟ್ಟಿ ತರಿಸಿ ಎಲ್ಲರೆದುರು ನಿಲ್ಲಿಸಿ ಆಟ ನಿಲ್ಲಿಸದಿದ್ದರೆ ಜೋಡು ಕೈಗೆತ್ತಿಕೊಳ್ಳುವುದಾಗಿ ಗದರಿಸಿರುವ ಘಟನೆ ವರದಿಯಾಗಿದೆ. ಡಿಸಿಎಂ ಕೈಲಿ ಉಗಿಸಿಕೊಂಡ ಸರ್ಕಾರಿ ಡಕಾಯಿತರು ಮುಖ ಒರೆಸಿಕೊಂಡು ಅಷ್ಟೇ ಅಲ್ಲವಾ ಬಿಡು ಎಂದು ಕಡೆಗೆ ಡಿಸಿಎಂ ಮತ್ತು ಕಮಿಷನರ್ ವಿರುದ್ಧವೇ ಕಂಡಕಂಡಲ್ಲಿ ಮಾತಾಡುತ್ತಾ ಅವರ ಮೇಲೆ ತಮ್ಮ ಚೇಲಾಗಳಲ್ಲಿ ಬಿಟ್ಟು ಬೇಹುಗಾರಿಕೆ ಮಾಡಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.. ಡಿಸಿಎಂ ಲಿಸ್ಟ್‌ ನಲ್ಲಿರುವ ಖದೀಮರ ರಿಯಲ್ ಎಸ್ಟೇಟ್ ಹೂಡಿಕೆ ಬಗ್ಗೆ ಸರ್ಕಾರ ವಿಶೇಷ ತನಿಖೆ ತನಿಖೆ ನಡೆಸಬೇಕು. ಅಕ್ರಮ ಸಂಪತ್ತಿನ ಮೂಲಕ ಎಮ್ಮಲ್ಲೆಗಳಾಗಲು ಹೊರಟವರಿಗೆ ಬರೆ ಎಳೆಯಬೇಕು.

Comments (0)

Your email address will not be published. Required fields are marked *

Back to top button