ನವದೆಹಲಿ: ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ ಕುಂದ್ರಾ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉದ್ಯಮಿಯಾಗಿರುವ ರಾಜ್ ಕುಂದ್ರಾ ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದಾರೆ.
2021ರ ಜೂನ್ನಲ್ಲಿ ನೀಲಿ ಚಿತ್ರಗಳನ್ನು ನಿರ್ಮಿಸಿದ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು. 2 ತಿಂಗಳು ಜೈಲುವಾಸ ಅನುಭವಿಸಿದ್ದ ರಾಜ್ ಕುಂದ್ರಾಗೆ 2021ರ ಸೆಪ್ಟೆಂಬರ್ ತಿಂಗಳಲ್ಲಿ ಜಾಮೀನು ಸಿಕ್ಕಿತ್ತು. ಇಡೀ ಪ್ರಕರಣದಲ್ಲಿ ರಾಜ್ ಕುಂದ್ರಾ ಮುಖ್ಯ ಮಾಸ್ಟರ್ ಪ್ಲಾನರ್ ಎಂದು ಮುಂಬೈ ಪೊಲೀಸರು ಹೇಳಿಕೆ ಕೊಟ್ಟಿದ್ದರು.
2021 ಫೆಬ್ರವರಿಯಲ್ಲಿ ನೀಲಿ ಚಿತ್ರ ನೆಟ್ವರ್ಕ್ ಅನ್ನು ಬೇಧಿಸಿದ್ದ ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಒಟ್ಟು ಒಂಬತ್ತು ಜನರನ್ನು ಅರೆಸ್ಟ್ ಮಾಡಿದ್ದರು. ಇನ್ನು ಈ ಹಿಂದೆಯೂ ಇಡಿ ಅಧಿಕಾರಿಗಳು ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಇಡಿ ಇಲಾಖೆ ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಜುಹುವಿನಲ್ಲಿರುವ ಐಶಾರಾಮಿ ಮನೆ, ಪುಣೆಯ ಮನೆ ಹಾಗೂ ಈಕ್ವಿಟಿ ಷೇರುಗಳು ಸಹ ಇದ್ದವು. 6,600 ಕೋಟಿ ಮೌಲ್ಯದ ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಲ್ಲಿ ರಾಜ್ ಕುಂದ್ರಾ ಮೇಲೆ ಇಡಿ ದಾಳಿ ನಡೆದಿತ್ತು.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ರಾಜ್ ಕುಂದ್ರಾ ಮೇಲೆ ದಾಳಿ ಆಗಿರುವ ಸಾಧ್ಯತೆ ಇದೆ. 2017 ರಲ್ಲಿ ರಾಜ್ ಕುಂದ್ರಾ ಮತ್ತು ಅವರ ಕೆಲವು ಆಪ್ತರು ಭಾರಿ ಮೊತ್ತದ ಹಣವನ್ನು ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಿ 6,600 ಕೋಟಿಗೂ ಹೆಚ್ಚು ಹಣ ಗಳಿಸಿದ್ದರು. ಜೊತೆಗೆ ಜನರಿಗೆ ಶೇಕಡಾ 10ರಷ್ಟು ಹಣ ಪಾವತಿಸುವುದಾಗಿ ಹೇಳಿ ಬಂಡವಾಳವನ್ನು ಸಹ ಆಕರ್ಷಿಸಿದ್ದರು. 2018ರಲ್ಲಿ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ಈ ಬಗ್ಗೆ ಸಮನ್ಸ್ ನೀಡಿ ವಿಚಾರಣೆ ಸಹ ಮಾಡಲಾಗಿತ್ತು.