ಇಡಿ ದಾಳಿ: ಮಂತ್ರಿ ಡೆವಲಪರ್ಸ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ

ಬೆಂಗಳೂರು: ನಗರದ ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆ ಮಂತ್ರಿ ಡೆವಲಪರ್ಸ್ ಹಾಗೂ ಸಂಸ್ಥಾಪಕ ಸುನಿಲ್ ಮಂತ್ರಿ ನಿವಾಸಗಳ ಮೇಲೆ ಇನ್‌ಕಮ್ ಟ್ಯಾಕ್ಸ್ ಹಾಗೂ ಇನ್ವೆಸ್ಟಿಗೇಶನ್ ಅಧಿಕಾರಿಗಳಿಂದ ಇಡಿ ದಾಳಿ ನಡೆಸಲಾಗಿದೆ. ಅಕ್ರಮ ಹಣ ವರ್ಗಾವಣೆಯ ಆರೋಪದಡಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
1999ರಲ್ಲಿ ಸ್ಥಾಪನೆಯಾದ ಮಂತ್ರಿ ಡೆವಲಪರ್ಸ್ ಬೆಂಗಳೂರು ಕೇಂದ್ರ ಕಚೇರಿಯೊಂದಿಗೆ ಚೆನ್ನೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಸತಿ, ವಾಣಿಜ್ಯ, ರಿಟೇಲ್ ಹಾಗೂ ಇತರೆ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದೆ.

ದೆಹಲಿ ಕಚೇರಿಯಿಂದ ಬಂದ ಸುಮಾರು 10ಕ್ಕೂ ಹೆಚ್ಚು ED ಅಧಿಕಾರಿಗಳು ಆರು ವಾಹನಗಳಲ್ಲಿ ಆಗಮಿಸಿ ಸಂಸ್ಥೆಯ ಕಚೇರಿ ಮತ್ತು ಸಂಸ್ಥಾಪಕ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇಡಿ ತಂಡವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸುತ್ತಿದೆ.
ಈ ಸಂಸ್ಥೆ ಹಿಂದೆ 2022ರಲ್ಲಿ ದಾಳಿ ಎದುರಿಸಿ, 2023ರಲ್ಲಿ ಸುಮಾರು 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಆರ್ಥಿಕ ತನಿಖೆಗಳಲ್ಲಿ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಲಾಗಿದೆ. ಇದೀಗ ಮತ್ತೆ ED ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದು, ಸಂಸ್ಥೆಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಶಪಡಿಸಿಕೊಂಡಿದ್ದಾರೆ.




