ಬೆಂಗಳೂರು: ನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರವಾಗಿ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನವು ಇಂದು ರಾಜಭವನ ಮತ್ತು ಸರ್ಕಾರದ ನಡುವಿನ ನೇರ ಸಂಘರ್ಷಕ್ಕೆ ಸಾಕ್ಷಿಯಾಯಿತು. ಅಧಿವೇಶನ ಉದ್ದೇಶಿಸಿ ಮಾತನಾಡಲು ಆಗಮಿಸಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸರ್ಕಾರ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಪೂರ್ಣವಾಗಿ ಓದದೆ ಕೇವಲ ಶುಭಾಶಯ ಕೋರಿ ನಿರ್ಗಮಿಸುವ ಮೂಲಕ ಸದನದಲ್ಲಿ ಸಂಚಲನ ಮೂಡಿಸಿದರು.
ನರೇಗಾ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುವ 11 ಪ್ರಮುಖ ಅಂಶಗಳನ್ನು ಭಾಷಣದಿಂದ ತೆಗೆದುಹಾಕುವಂತೆ ರಾಜ್ಯಪಾಲರು ಬುಧವಾರ ಸೂಚಿಸಿದ್ದರು. ಆದರೆ, ಈ ಸೂಚನೆಯನ್ನು ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಅಧಿವೇಶನಕ್ಕೆ ಬರುತ್ತಾರೋ ಇಲ್ಲವೋ ಎಂಬ ಕುತೂಹಲ ಮೂಡಿತ್ತು. ಒಂದು ವೇಳೆ ಅವರು ಬಾರದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ನಡೆಸಿತ್ತು.
ನಿರೀಕ್ಷೆಯಂತೆ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲರು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆದರೆ, ಭಾಷಣ ಆರಂಭಿಸಿದ ಅವರು, ಸರ್ಕಾರ ನೀಡಿದ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರದ ಕೇವಲ ಒಂದೆರಡು ಸಾಲುಗಳನ್ನು ಮಾತ್ರ ಓದಿದರು.
ರಾಜ್ಯದ ಜನತೆಗೆ ಮತ್ತು ಸದನಕ್ಕೆ ಶುಭಾಶಯಗಳನ್ನು ತಿಳಿಸಿ ಭಾಷಣ ಮುಕ್ತಾಯಗೊಳಿಸಿದರು. ಸರ್ಕಾರದ ಕರಡು ಭಾಷಣದಲ್ಲಿದ್ದ ಕೇಂದ್ರದ ವಿರುದ್ಧದ ಟೀಕೆಗಳನ್ನು ಓದದೆ ಅಲ್ಲಿಂದ ನಿರ್ಗಮಿಸಿದರು.
ರಾಜ್ಯಪಾಲರ ಈ ನಡೆಯಿಂದ ಆಕ್ರೋಶಗೊಂಡ ಆಡಳಿತ ಪಕ್ಷದ ಶಾಸಕರು ಸದನದಲ್ಲೇ ಪ್ರತಿಭಟನೆಗೆ ಇಳಿದರು. ರಾಜ್ಯಪಾಲರು ಹೊರಹೋಗುತ್ತಿದ್ದಂತೆ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಅವರು ಅವರನ್ನು ತಡೆಯಲು ಮುಂದಾದರು. ಈ ವೇಳೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧ ಜೋರು ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ವಿಧಾನಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ, ಹೈಡ್ರಾಮಾವೇ ನಡೆಯಿತು.


