ವಾಷಿಂಗ್ಟನ್ : ಸರಿ ಸುಮಾರು ಎರಡೂವರೆ ಶತಮಾನದ ಅಮೆರಿಕದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ತುರುಸಿನ ಸ್ಪರ್ಧೆ ಕಂಡ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನ.5ರಂದು ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಟ್ರಂಪ್, ತಮ್ಮ ಎದುರಾಳಿ, ಭಾರತೀಯ ಮೂಲದ ಮಹಿಳೆ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಅಮೆರಿಕದ 47ನೇ ಅಧ್ಯಕ್ಷರಾಗಿ ಜಯದ ನಗೆ ಬೀರಿದ್ದಾರೆ.
ಜನವರಿಯಲ್ಲಿ ಅವರು ಪ್ರಮಾಣವಚನ :
ಜನವರಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಈ ಹಿಂದೆ 2017-21ರ ಅವಧಿಯಲ್ಲೂ ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್ ಅವರ ಈಗಿನ ಗೆಲುವನ್ನು ಐತಿಹಾಸಿಕ ಪುನರಾಗಮನ ಎಂದು ಬಣ್ಣಿಸಲಾಗಿದೆ.ಇದರೊಂದಿಗೆ ಅಮೆರಿಕ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯನ್ನು ಕಾಣಬಹುದು ಮತ್ತು ಭಾರತೀಯ ಮೂಲದವರೊಬ್ಬರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮತ್ತೊಂದೆಡೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಹಿರಿಯ, ಎರಡು ಪ್ರತ್ಯೇಕ ಅವಧಿಗೆ ಆಯ್ಕೆಯಾದ ಎರಡನೇ ವ್ಯಕ್ತಿ ಎಂಬ ದಾಖಲೆ ಟ್ರಂಪ್‌ಗೆ ಒಲಿದು ಬಂದಿದೆ.
ಟ್ರಂಪ್‌ಗೆ ಅಧ್ಯಕ್ಷಗಿರಿ: ಎಲ್ಲಾ ಆರಂಭಿಕ ಹಿನ್ನಡೆಗಳನ್ನೂ ಮೆಟ್ಟಿನಿಂತ ಟ್ರಂಪ್, ಅತ್ಯಂತ ಹೆಚ್ಚು ಮತಗಳನ್ನು ಹೊಂದಿದ್ದ 7 ರಾಜ್ಯಗಳ ಪೈಕಿ ಎಲ್ಲಾ ರಾಜ್ಯಗಳನ್ನೂ ಗೆದ್ದು, ಉಳಿದ ಕಡೆಯೂ ಮುನ್ನಡೆ ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
ಬಹುಮತಕ್ಕೆ…270
ಡೊನಾಲ್ಡ್ ಟ್ರಂಪ್….280
ಕಮಲಾ ಹ್ಯಾರಿಸ್…224
ಎಣಿಕೆ ಬಾಕಿ…34
ಫೀನಿಕ್ಸ್‌ನಂತೆ ಎದ್ದುಬಂದ ಟ್ರಂಪ್: 2020ರಲ್ಲಿ ಜೋ ಬೈಡೆನ್ ವಿರುದ್ದ ಆಘಾತಕಾರಿ ಸೋಲು ಕಂಡಿದ್ದ ಟ್ರಂಪ್, ಫಲಿತಾಂಶ ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಬಳಿಕ ಟ್ರಂಪ್ ಅಣತಿಯಂತೆ ಅವರ ಬೆಂಬಲಿಗರು ಅಮೆರಿಕದ ಸಂಸತ್ ಮೇಲೆ ದಾಳಿ ನಡೆಸಿ ಇತಿಹಾಸದ ಕರಾಳ ಘಟನೆಯೊಂದಕ್ಕೆ ಕಾರಣರಾಗಿದ್ದರು. ಈ ಪ್ರಕರಣದಲ್ಲಿ ಅವರನ್ನು ಘೋರ ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿತ್ತು. ಹೀಗಾಗಿ ಟ್ರಂಪ್ ಜೈಲು ಪಾಲಾಗುವ ಸಾಧ್ಯತೆ ದಟ್ಟವಾಗಿತ್ತು. ಮತ್ತೊಂದೆಡೆ ಶ್ವೇತಭವನದ ರಹಸ್ಯ ಕಡತಗಳನ್ನು ತಮ್ಮ ಬಂಗಲೆಗೆ ಕರೆದ್ದೊಯ್ದ, ಸೆಕ್ಸ್ ಹಗರಣ ಮುಚ್ಚಿಡಲು ಹಣ ಪಾವತಿಸಿದ ಹಗರಣಗಳೂ ಅವರನ್ನು ಸುತ್ತಿಕೊಂಡಿದ್ದವು. ಹೀಗಾಗಿ ಈ ಬಾರಿ ಚುನಾವಣೆಗೆ ಅವರ ಸ್ಪರ್ಧೆಯೇ ಅನುಮಾನ ಎನ್ನುವ ಹೊತ್ತಿನಲ್ಲೇ ಅವರೀಗ ದೇಶದ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಇದರೊಂದಿಗೆ ತಮ್ಮೆಲ್ಲಾ ಕಳಂಕ ತೊಳೆದುಕೊಳ್ಳುವ ಅವಕಾಶ ಅವರ ಕೈ ಸೇರಿದೆ. ಜೊತೆಗೆ ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಜೈಲು ಪಾಲಾಗುವ ಸಾಧ್ಯತೆಯೂ ದೂರವಾಗಿದೆ.
ಹಲವು ಕಳಂಕಗಳ ಸರದಾರ!
– 2020ರಲ್ಲಿ ಜೋ ಬೈಡೆನ್ ವಿರುದ್ಧ ಸೋತಾಗ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿ ಅಮೆರಿಕದ ಸಂಸತ್ ಭವನದ ಮೇಲೇ ತಮ್ಮ ಬೆಂಬಲಿಗರೊಂದಿಗೆ ಟ್ರಂಪ್ ದಾಳಿ ನಡೆಸಿದ್ದರು. ಆ ಕೇಸಿನಲ್ಲಿ ಅವರು ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿತ್ತು.
– ಶ್ವೇತಭವನದ ರಹಸ್ಯ ಕಡತಗಳನ್ನು ಕದ್ದು ತಮ್ಮ ಬಂಗಲೆಗೆ ಒಯ್ದ ಆರೋಪ ಟ್ರಂಪ್ ಮೇಲಿತ್ತು.
– ಒಂದಕ್ಕಿಂತ ಹೆಚ್ಚು ಸೆಕ್ಸ್ ಹಗರಣಗಳಲ್ಲಿ ಟ್ರಂಪ್ ದೋಷಿಯಾಗಿದ್ದಾರೆ. ಈಗಲೂ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳಿವೆ.