ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ‘ಡಾಲಿ’ ಧನಂಜಯ್ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಅಪ್ಪಟ ಪ್ರತಿಭೆಯ ಮೂಲಕ ಮನೆಮಾತಾಗಿರುವ ಧನಂಜಯ್ ಶೀಘ್ರದಲ್ಲೇ ಪೋಷಕರಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಖಾಸಗಿ ಮಾಧ್ಯಮವೊಂದು ಆಯೋಜಿಸಿದ್ದ ಅದ್ದೂರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದ ಧನಂಜಯ್, ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗುತ್ತಿರುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. “ನಮ್ಮ ಕುಟುಂಬಕ್ಕೆ ಇನ್ನೊಂದು ಹೊಸ ಜೀವ ಸೇರ್ಪಡೆ ಆಗುತ್ತಿದೆ” ಎಂದು ಹೇಳುವ ಮೂಲಕ ತಾವು ತಂದೆಯಾಗುತ್ತಿರುವ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಡಾಲಿ ಧನಂಜಯ್ ಕಳೆದ ವರ್ಷ ಅಂದರೆ 2025ರ ಫೆಬ್ರವರಿ 16 ರಂದು ಮೈಸೂರಿನಲ್ಲಿ ವೈದ್ಯೆ ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಫ್ಯಾನ್ಸ್ ಫುಲ್ ಖುಷ್!
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಡುತ್ತಿದ್ದಂತೆಯೇ ಡಾಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಸದ್ಯ ಧನಂಜಯ್ ನಟನೆಯ ಜೊತೆಗೆ ತಮ್ಮ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಸಾಲು ಸಾಲು ಸಿನಿಮಾಗಳ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ಜೀವನದ ಈ ಹೊಸ ಪಯಣ ಅವರಿಗೆ ಮತ್ತಷ್ಟು ಖುಷಿ ತಂದಿದೆ.


