ನಟ ಧನಂಜಯ ಅವರು ಕೊನೆಗೂ ‘ನಾನು ಮದುವೆ ಆಗ್ತಿದ್ದೇನೆ’ ಎಂದು ಹೇಳಿದ್ದಾರೆ. ಇಡೀ ನಾಡು ದೀಪಾವಳಿ ಹಬ್ಬದ ಖುಷಿಯಲ್ಲಿರುವಾಗ, ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಧನಂಜಯ ಗುಡ್‌ನ್ಯೂಸ್ ನೀಡಿದ್ದಾರೆ. ಇಷ್ಟುದಿನ ‘ಎಲ್ಲರೂ ಮದುವೆ ಯಾವಾಗ’ ಎಂದು ಕೇಳುತ್ತಿದ್ದ ಪ್ರಶ್ನೆಗೆ ಧನಂಜಯ ಉತ್ತರ ನೀಡಿದ್ದಾರೆ. ಬಹುಕಾಲದ ಗೆಳತಿ ಜೊತೆ ಅವರ ವಿವಾಹ ನೆರವೇರುತ್ತಿದೆ. ಈ ಗುಡ್ನ್ಯೂಸ್ನ ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾವಿ ಪತ್ನಿ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

ಹೌದು, ಧನಂಜಯ ಅವರು ಮದುವೆ ಆಗುತ್ತಿದ್ದೆ. ವಿಶೇಷ ವಿಡಿಯೋ ಮೂಲಕ ಅವರು ಹುಡುಗಿಯನ್ನು ಪರಿಚಯಿಸಿದ್ದಾರೆ. ಧನ್ಯತಾ ಅವರನ್ನು ಡಾಲಿ ಕೈಹಿಡಿಯುತ್ತಿದ್ದಾರೆ. ಧನ್ಯತಾ ಅವರು ಚಿತ್ರದುರ್ಗದವರು. ಆದರೆ ಅರಸಿಕೆರೆಯಲ್ಲಿ ಬೆಳೆದಿದ್ದರು ಎನ್ನಲಾಗಿದೆ. ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಧನ್ಯತಾ, ಧನಂಜಯ ಪರಿಚಯಸ್ಥರು. ಮೈಸೂರು ನಗರ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಕನೆಕ್ಟ್ ಆದ ಸ್ಥಳ. ಹೀಗಾಗಿ ಅಲ್ಲಿಯೇ 2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ.

ಧನಂಜಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೇನು?
ಪ್ರೀತಿಯ ಕರುನಾಡಿಗೆ,
ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ.
ಮದುವೆಗೆ ಕರಿತೀನಿ,… pic.twitter.com/0M4CL0cQDL
— Dhananjaya (@Dhananjayaka) November 1, 2024
ಅಂದಹಾಗೆ ಈ ಜೋಡಿಗೆ ತರುಣ್ ಸುಧೀರ್, ವಾಸುಕಿ ವೈಭವ್, ಕಾರ್ತಿಕ್ ಮಹೇಶ್ ಮುಂತಾದವರು ಶುಭ ಹಾರೈಸಿದ್ದಾರೆ. ಧನಂಜಯ ಅವರ ಸ್ನೇಹಿತರ ಬಳಗದಲ್ಲಿ ಎಲ್ಲರಿಗೂ ಮದುವೆ ಆಗಿದ್ದು, ಡಾಲಿ ಮಾತ್ರ ಬಾಕಿ ಉಳಿದಿದ್ದರು. ಇನ್ನು ಧನಂಜಯ ಅವರು ಮದುವೆ ಆಗಬೇಕು ಎನ್ನೋದು ಅವರ ತಾಯಿ, ಅಜ್ಜಿ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಬಯಸಿದ್ದರು. ಅದರಂತೆ ಧನಂಜಯ ಬದುಕೀಗ ಧನ್ಯವಾಗಿದೆ. ಇನ್ನು ಮದುವೆ ವಿಚಾರವಾಗಿ ಧನಂಜಯ ಅವರು ಇನ್ನು ಹೆಚ್ಚಿನ ಮಾಹಿತಿ ನೀಡಬೇಕಿದೆ.

ಧನಂಜಯ ಅವರಿಗೆ ಈಗ 39 ವರ್ಷ ವಯಸ್ಸು. ಚಿಕ್ಕ ವಯಸ್ಸಿನಿಂದಲೂ ಉತ್ತಮ ಅಂಕ ಗಳಿಸುತ್ತಿದ್ದ ಧನಂಜಯ ಅವರು ಮೈಸೂರಿನ ಎಸ್‌ಜೆಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿ, ಇನ್‌ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಅವರಿಗೆ ನಟನೆ ಮೇಲೆ ಭಾರೀ ಆಸಕ್ತಿ. ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡುತ್ತ ಕೊನೆಗೂ ಧನಂಜಯ ಅವರು ಹೀರೋ ಆದರು.

ಆಮೇಲೆ ಹೀರೋ ಆಗಿಯೂ ಸಾಲು ಸಾಲು ಸೋಲು ಕಂಡಬಳಿಕ ಧನಂಜಯ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದು, ಈಗ ನಿರ್ಮಾಪಕರಾಗಿದ್ದಾರೆ. ಧನಂಜಯ ಅವರು ಪರಭಾಷೆಯ ಸ್ಟಾರ್ ನಟರ ಸಿನಿಮಾಗಳಲ್ಲಿ ವಿಲನ್ ಆಗಿ ಗೆದ್ದಿದ್ದಾರೆ. ಒಟ್ಟಿನಲ್ಲಿ ಧನಂಜಯ ಅವರು ದಕ್ಷಿಣ ಭಾರತದ ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ.



