ಬೆಂಗಳೂರು: ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12ಕ್ಕೆ ಅದ್ಧೂರಿ ತೆರೆ ಬಿದ್ದಿದೆ. 112 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಈ ಮಹಾ ಸಮರದಲ್ಲಿ ಮಂಗಳೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ರಕ್ಷಿತಾ ಶೆಟ್ಟಿ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅಂತಿಮ ಹಂತದಲ್ಲಿ ಟೈಟಲ್ ಗೆಲ್ಲುವ ಅವಕಾಶ ಕೈತಪ್ಪಿದರೂ, ಕೋಟ್ಯಾಂತರ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಕ್ಷಿತಾ ಶೆಟ್ಟಿ ಅವರ ಪಯಣ ಸುಲಭದ್ದಾಗಿರಲಿಲ್ಲ. ಮಂಗಳೂರಿನ ಪಡುಬಿದ್ರೆಯಲ್ಲಿ ಜನಿಸಿದ ರಕ್ಷಿತಾ, ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ತುಳು ಮಾತನಾಡುವ ಇವರಿಗೆ ಆರಂಭದಲ್ಲಿ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಆದರೆ, ಭಾಷೆಯ ಗಡಿಯನ್ನು ಮೀರಿ ಕನ್ನಡದಲ್ಲಿ ವ್ಲಾಗ್ಸ್ ಮತ್ತು ರೀಲ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅವರು ಸೃಷ್ಟಿಸಿದ್ದ ಹವಾ, ಅವರನ್ನು ಬಿಗ್ ಬಾಸ್ ಮನೆವರೆಗೆ ಕರೆತಂದಿತ್ತು.
ರಕ್ಷಿತಾ ಬಿಗ್ ಮನೆಯೊಳಗೆ ತಮ್ಮ ನೇರ ನಡೆ-ನುಡಿಯಿಂದ ಗಮನ ಸೆಳೆದಿದ್ದರು. ಮನಸ್ಸಿಗೆ ಅನಿಸಿದ್ದನ್ನು ಯಾವುದೇ ಮುಲಾಜಿಲ್ಲದೆ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಅವರ ವ್ಯಕ್ತಿತ್ವ ವೀಕ್ಷಕರಿಗೆ ಇಷ್ಟವಾಗಿತ್ತು. ಕನ್ನಡ ಭಾಷೆಯ ಮೇಲಿನ ಅವರ ಪ್ರೀತಿ ಮತ್ತು ಕಲಿಯುವ ಉತ್ಸಾಹಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಈ ಬಾರಿಯ ಸೀಸನ್‌ನಲ್ಲಿ ರಕ್ಷಿತಾ ಅವರೇ ವಿನ್ನರ್ ಆಗಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಯಾನವೇ ನಡೆದಿತ್ತು.
ಒಟ್ಟು 24 ಸ್ಪರ್ಧಿಗಳ ನಡುವೆ ನಡೆದ ಈ ವ್ಯಕ್ತಿತ್ವದ ಹೋರಾಟದಲ್ಲಿ ರಕ್ಷಿತಾ ಶೆಟ್ಟಿ ಅಂತಿಮ ಹಂತದವರೆಗೂ ಹೋರಾಡಿ ಎರಡನೇ ಸ್ಥಾನ ಪಡೆದಿದ್ದಾರೆ. ಬಿಗ್ ಬಾಸ್ ವೇದಿಕೆಯ ಮೂಲಕ ಕರ್ನಾಟಕದ ಮೂಲೆ ಮೂಲೆಗೂ ತಲುಪಿರುವ ಇವರಿಗೆ ಈಗ ಸಿನಿಮಾ ಹಾಗೂ ಕಿರುತೆರೆಯಿಂದ ಹೆಚ್ಚಿನ ಅವಕಾಶಗಳು ಹರಿದುಬರುವ ನಿರೀಕ್ಷೆಯಿದೆ.


