ಚಿಕ್ಕಬಳ್ಳಾಪುರ: ಮನೆಯ ವಿಚಾರಕ್ಕೆ ದಾಯಾದಿಗಳ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ..
ಮನೆ ವಿಚಾರಕ್ಕೆ ಪಂಚಾಯತಿ ಮಾಡುತ್ತಿದ್ದ ವೇಳೆ ಅಣ್ಣ, ತಮ್ಮಂದಿರ ನಡುವೆ ಮಾತಿಗೆ ಮಾತು ಬೆಳೆದು ಸಹೋದರನ ಮಗ ದೊಡ್ಡಪ್ಪನನ್ನು ಹಿಂದೆ ತಳ್ಳಿದ್ದಾನೆ. ಪಕ್ಕದಲ್ಲೇ ಇದ್ದ ಕಬ್ಬಿಣದ ಗೇಟ್ ತಲೆಗೆ ತಗುಲಿ ದೊಡ್ಡಪ್ಪ ನಾರಾಯಣಸ್ವಾಮಿ ಕೆ.ಎಲ್ (66) ಸಾವನ್ನಪ್ಪಿದ್ದು, ಮಧುಸೂದನ್ ಎಂಬಾತನ ಮೇಲೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ..
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುರ್ರಂಪಲ್ಲಿ ಗ್ರಾಮದಲ್ಲಿ 66 ವರ್ಷದ ಕೆ.ಎಲ್. ನಾರಾಯಣಸ್ವಾಮಿ ಹಾಗೂ ಕೆ.ಎಲ್. ಮದ್ದಿರೆಡ್ಡಿ ಎಂಬ ಸಹೋದರರು ವಾಸವಾಗಿದ್ದರು. ಕೆಎಲ್ ಮದ್ದಿರೆಡ್ಡಿ ಮಗ ಮಧುಸೂದನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
2005ರಲ್ಲಿ ಮಧುಸೂದನ್ ತಂದೆ ಮದ್ದಿರೆಡ್ಡಿ, ತಮ್ಮ ಹಳೆಯ ಮನೆಯೊಂದನ್ನು ರತ್ನಮ್ಮ ಎನ್ನುವವರಿಗೆ ಮಾರಾಟ ಮಾಡಿದ್ದರು. ಇದೇ ವಿಚಾರವಾಗಿ ನಾರಾಯಣಸ್ವಾಮಿ ಹಾಗೂ ಮದ್ದಿರೆಡ್ಡಿ ಕುಟುಂಬಗಳ ಮಧ್ಯೆ ಹಣಕಾಸು ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ ಇತ್ತು. ಇದೆ ವಿಚಾರದಲ್ಲಿ ಮಧುಸೂದನ್, ತನ್ನ ದೊಡ್ಡಪ್ಪ ಹಾಗೂ ಅವರ ಕುಟುಂಬದವರ ವಿರುದ್ಧ ಕೂಗಾಡುತ್ತಿದ್ದ. ಇದನ್ನು ಗಮನಿಸಿದ್ದ ನಾರಾಯಣಸ್ವಾಮಿ ಹಾಗೂ ಅವರ ಪುತ್ರ ರವಿಕುಮಾರ್, ಮಧುಸೂದನ್ ಮನೆ ಬಳಿ ಹೋಗಿ ಪ್ರಶ್ನಿಸಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ಉಂಟಾಗಿದೆ. ಈ ವೇಳೆ ಮಧುಸೂದನ್ ಬಲವಾಗಿ ತಮ್ಮ ದೊಡ್ಡಪ್ಪನನ್ನು ಹಿಂದಕ್ಕೆ ನೂಕಿದ್ದಾನೆ. ಆಗ ಮನೆಯ ಗೇಟ್ ನಾರಾಯಣಸ್ವಾಮಿ ತಲೆಗೆ ತಗುಲಿದೆ. ಗಂಭಿರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಚಿಂತಾಮಣಿ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಆರೋಪಿ ಮಧುಸೂದನ್, ಆಂಧ್ರ ಕಡೆ ಎಸ್ಕೇಪ್ ಆಗಿರುವ ಮಾಹಿತಿ ಹಿನ್ನೆಲೆ ಪೊಲೀಸರು ಬಂಧನಕ್ಕೆ ಬಲೆ ಬಿಸಿದ್ದಾರೆ.


