#Exclusive NewsTop News

ಆಹಾರ ವ್ಯರ್ಥ ಮಾಡ್ತೀರಾ? ಹಾಗಿದ್ರೆ ಎಚ್ಚರ! ಬರಲಿದೆ ಹೊಸ ಕಾನೂನು

ಆಹಾರವನ್ನು ವ್ಯರ್ಥ ಮಾಡಬೇಡಿ ಎಂಬ ಸಲಹೆಯುಳ್ಳ ಭಿತ್ತಿಪತ್ರಗಳನ್ನು ಕೆಲವು ಹೋಟೆಲ್​​ಗಳಲ್ಲಿ, ಸಾರ್ವಜನಿಕ ಸಮಾರಂಭದ ಹಾಲ್​​ಗಳಲ್ಲಿ ಹಾಕಿರುವುದನ್ನು ಗಮನಿಸಿರುತ್ತೇವೆ. ಆದರೆ, ಇದು ಸಲಹೆಯಷ್ಟೆ. ಇದನ್ನು ಹಲವರು ಪಾಲಿಸಿದರೆ ಇನ್ನು ಅನೇಕರು ಪಾಲಿಸುವುದಿಲ್ಲ. ಆದರೆ, ಇದೀಗ ಕರ್ನಾಟಕ ಸರ್ಕಾರ ಆ ಬಗ್ಗೆ ಕಾನೂನು ರೂಪಿಸಲು ಮುಂದಾಗಿದೆ. ಆ ಬಗ್ಗೆ ಆಹಾರ ಸಚಿವರು ನೀಡಿದ ಸುಳಿವು ಏನೆಂಬುದನ್ನು ತಿಳಿಯಲು ಮುಂದೆ ಓದಿ.

ಬೆಂಗಳೂರು, ಅಕ್ಟೋಬರ್ 17: ಅದೆಷ್ಟೋ ಮಂದಿ ಬಡತನದಿಂದ ಹೊಟ್ಟೆಗೆ ಆಹಾರವಿಲ್ಲದೆ ಕಂಗೆಡುವ ಪರಿಸ್ಥಿತಿ ಇರುವಾಗ ಹೋಟೆಲ್​​ಗಳಲ್ಲಿ, ಇತರ ಸಾರ್ವಜನಿಕ ಸ್ಥಳಗಳಲ್ಲಿ ವ್ಯರ್ಥವಾಗಿ ಆಹಾರ ಪೋಲು ಮಾಡುವುದನ್ನೂ ನಾವು ಕಾಣುತ್ತೇವೆ. ಇದೀಗ ಆಹಾರ ವ್ಯರ್ಥ ವಿಚಾರಕ್ಕೆ ಸಂಬಂಧಿಸಿ ಕಾನೂನು ರೂಪಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆಯಂತೆ. ಈ ಬಗ್ಗೆ ಖುದ್ದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಎಚ್​ ಮುನಿಯಪ್ಪ ಸುಳಿವು ನೀಡಿದ್ದಾರೆ.

ಮುನಿಯಪ್ಪ ಹೇಳಿದ್ದೇನು?

ಹೋಟೆಲ್‌ಗಳು ಮತ್ತು ಬ್ಯಾಂಕ್ವೆಟ್ ಹಾಲ್‌ಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಹೋಟೆಲ್‌ಗಳು ಮತ್ತು ಮದುವೆ ಮಂಟಪಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಸರ್ಕಾರವು ಕರಡು ನಿಯಮ ರೂಪಿಸಲಿದೆ. ದೇಶದಲ್ಲಿ ವಾರ್ಷಿಕವಾಗಿ 90,000 ಕೋಟಿ ರೂ. ಮೌಲ್ಯದ ಆಹಾರ ವ್ಯರ್ಥವಾಗುತ್ತದೆ. ಆಹಾರವನ್ನು ವ್ಯರ್ಥ ಮಾಡದಂತೆ ಮಕ್ಕಳಿಗೆ ಕಲಿಸುವುದು ಮತ್ತು ಆಹಾರವನ್ನು ಸರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button