ಬೆಂಗಳೂರು: ಸಾಹಿತಿ ಎಸ್.ಎಲ್ ಭೈರಪ್ಪನವರ ಸ್ಮಾರಕ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಭರವಸೆ ನೀಡಿದ್ಧಾರೆ. ಇಂದು ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡಿ ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರಕ್ಕೆ ಡಿ.ಕೆ ಶಿವಕುಮಾರ್ ಅವರು ಅಂತಿಮ ನಮನ ಸಲ್ಲಿಸಿದರ.
ಭೈರಪ್ಪನವರ ಅಗಲಿಕೆ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಭೈರಪ್ಪ ಅವರ ಕಾದಂಬರಿಗಳು ಕೇವಲ ಕನ್ನಡ ಓದುಗರಿಗೆ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿ ಅನೇಕ ಭಾಷೆಗಳಿಗೆ ಅನುವಾದಗೊಂಡು ಜಾಗತಿಕ ಮನ್ನಣೆ ಗಳಿಸಿವೆ. ‘ಪರ್ವ’, ‘ದಾಟು’, ‘ಗೃಹಭಂಗ’ ಮುಂತಾದ ಕಾದಂಬರಿಗಳು ಭಾರತೀಯ ಸಂಸ್ಕೃತಿಯ ಆಳವಾದ ಚಿಂತನೆಯನ್ನು ಪ್ರತಿಬಿಂಬಿಸುತ್ತವೆ. ಅವರ ಬರವಣಿಗೆಯ ಶೈಲಿ, ದಿಟ್ಟವಾದ ವಿಚಾರಗಳು ಮತ್ತು ಸತ್ಯಕ್ಕೆ ಬದ್ಧವಾದ ನಿಲುವು ಓದುಗರ ಮನಸ್ಸನ್ನು ಸೆಳೆಯಿತು.
ಭೈರಪ್ಪನವರಿಗೆ ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಅವರ ಕೃತಿಗಳು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದವು. ದೇಶದ ಅನೇಕ ಗಣ್ಯರು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.


