ರಾಮನಗರ: ಜನವರಿ 6 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ..
ರಾಮನಗರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು, ಅವರಿಗೆ ಅವಕಾಶ ಸಿಗಬೇಕು ಅನ್ನೋದು ನಮ್ಮ ಬೇಡಿಕೆ. ಇದಕ್ಕೆ ಹೈಕಮಾಂಡ್ ಸ್ಪಂದಿಸುತ್ತಿದೆ. ಬಹುಶಃ ಜನವರಿ 6ರಂದು ಸಿಎಂ ಸ್ಥಾನ ಸಿಗುವ ಶೇಕಡಾ 99ರಷ್ಟು ವಿಶ್ವಾಸ ಇದೆ. ಜನವರಿ 6 ಮತ್ತು ಜನವರಿ 9 ಅದೃಷ್ಟದ ದಿನ. ಲಕ್ಕಿ ನಂಬರ್ ಎಂದೇ ಹೇಳಬಹುದು. ನಮ್ಮಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ನಮ್ಮ ಬೇಡಿಕೆ ಡಿಕೆಶಿ ಹೋರಾಟಕ್ಕೆ, ಶ್ರಮಕ್ಕೆ ಪ್ರತಿಫಲ ಸಿಗಬೇಕು ಅನ್ನೋದು ಎಂದರು.
ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಇಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಏನೇ ಹೇಳಿಕೊಳ್ಳಲಿ. ರಾಜ್ಯದ ಜನ ಹಾಗೂ ಈ ಭಾಗದ ಶಾಸಕರು ಡಿಕೆಶಿಗೆ ಅವಕಾಶ ಕೊಡಿ ಅಂತ ಕೇಳಿದ್ದೇವೆ. ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಖಚಿತ. ನಮ್ಮಲ್ಲಿ 140 ಜನ ಶಾಸಕರಿದ್ದಾರೆ. ನಮ್ಮಲ್ಲಿ ಸಂಖ್ಯಾಬಲದ ವಿಚಾರ ಬರಲ್ಲ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ, ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.
ನಾಳೆ ನಾನೂ ದೆಹಲಿಗೆ ಹೋಗ್ತಿದ್ದೇನೆ. ವೋಟ್ ಚೋರಿ ವಿರುದ್ಧ ಬೃಹತ್ ಪ್ರತಿಭಟನೆ ಇದೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ದೆಹಲಿಗೆ ಹೋಗ್ತಿದ್ದೇವೆ. ಪ್ರತಿ ಕ್ಷೇತ್ರದಿಂದ ತೆರಳಿ ಪ್ರತಿಭಟನೆ ಬೆಂಬಲ ಸೂಚಿಸುತ್ತಿದ್ದೇವೆ. ನಾವು ಯಾವುದೇ ವರಿಷ್ಠರನ್ನ ಭೇಟಿ ಮಾಡಲ್ಲ. ನಮ್ಮ ಮನವಿಯನ್ನ ವರಿಷ್ಠರಿಗೆ ತಿಳಿಸಿದ್ದೇವೆ. ಮನವಿಗೆ ಸ್ಪಂದನೆ ಸಿಕ್ಕಿದೆ. ಶೀಘ್ರವಾಗಿ ತೀರ್ಮಾನ ತೆಗದುಕೊಳ್ತಾರೆ ಎಂದಿದ್ದಾರೆ.


