Tuesday, April 29, 2025
29.1 C
Bengaluru
LIVE
ಮನೆ#Exclusive Newsಸಿಪಿ ಯೋಗೇಶ್ವರ್​ನ್ನು​​ ಕಾಂಗ್ರೆಸ್​ಗೆ ಕರೆ ತರಲು ಡಿ.ಕೆ.ಬ್ರದರ್ಸ್​ ತಂತ್ರ ಸಕ್ಸಸ್​!​

ಸಿಪಿ ಯೋಗೇಶ್ವರ್​ನ್ನು​​ ಕಾಂಗ್ರೆಸ್​ಗೆ ಕರೆ ತರಲು ಡಿ.ಕೆ.ಬ್ರದರ್ಸ್​ ತಂತ್ರ ಸಕ್ಸಸ್​!​

ಕಳೆದ ಎರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಚರ್ಚೆ ನಡೆದಂತೆ, ಕುಮಾರಸ್ವಾಮಿ ಹೇಳಿದಂತೆ ಕೊನೆ ಕ್ಷಣದಲ್ಲಿ ಸಿಪಿ ಯೋಗೇಶ್ವರ್ ಅವರು​ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇಂದು (ಅಕ್ಟೋಬರ್ 23) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಯೋಗೇಶ್ವರ್​ ಅಧಿಕೃತವಾಗಿ ಕಾಂಗ್ರೆಸ್ ಮನೆ ಸೇರಿದರು. ಈ ಮೂಲಕ ಯೋಗೇಶ್ವರ್​, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಕಣಕ್ಕಿಳಿಯುವುದು ಖಚಿತವಾಗಿದೆ.

ಈ ಮೊದಲೇ ಸುಳಿವು ನೀಡಿದ್ದ ಎಚ್​ಡಿಕೆ

ಇನ್ನು ಸಿಪಿ ಯೋಗೇಶ್ವರ್​ ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಕಾಂಗ್ರೆಸ್​ ಸೇರುತ್ತಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಅಷ್ಟೇ ಅಲ್ಲದೇ ಸ್ವತಃ ಕುಮಾರಸ್ವಾಮಿ ಅವರೇ ಯೋಗೇಶ್ವರ್​ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಅಂದೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮೈತ್ರಿ ನಾಯಕರಲ್ಲಿ ನಡುಕ ಉಂಟುಮಾಡಿತ್ತು. ಅಲ್ಲದೇ ಸ್ವತಃ ಕುಮಾರಸ್ವಾಮಿಗೆಯೇ ಕೊಂಚ ಆತಂಕವಾಗಿತ್ತು. ಯಾಕಂದ್ರೆ,  ಪುತ್ರ ನಿಖಿಲ್​ಗೆ ಟಿಕೆಟ್​ ನೀಡಬೇಕೆಂಬ ಆಸೆ ಇತ್ತು. ಒಂದು ವೇಳೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದರೆ ಬಿಜೆಪಿಯ ಒಳ ಏಟು ಬೀಳುವ ಆತಂಕ ಅವರನ್ನು ಕಾಡಿದೆ. ಹೀಗಾಗಿ ಕುಮಾರಸ್ವಾಮಿ, ಯೋಗೇಶ್ವರ್​ಗೆ ಜೆಡಿಎಸ್​ನಿಂದ ಸ್ಪರ್ಧಿಸಿ ಎಂದು ಆಫರ್ ಕೊಟ್ಟಿದ್ದರು. ಇತ್ತ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್, ಸಿಪಿ ಯೋಗೇಶ್ವರ್​ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರು ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿಕೊಂಡೇ ಬಂದಿದ್ದರು.

ಡಿಕೆ ಬ್ರದರ್ಸ್​ ತಂತ್ರ ಸಕ್ಸಸ್!

ಆದ್ರೆ, ಒಳಗೊಳಗೆ ಕಳೆದ ಮೂರ್ನಾಲ್ಕು ದಿನಗಳಿಂದ ಡಿ.ಕೆ.ಶಿವಕುಮಾರ್ ಮತ್ತು ಡಿಕೆ ಸುರೇಶ್ ತಂತ್ರಗಾರಿಕೆ ರೂಪಿಸಿ ಸೈಲೆಂಟ್ ಆಗಿಯೇ ಯೋಗೇಶ್ವರ್​ಗೆ ಗಾಳ ಹಾಕಿದ್ದರು ಎಂದು ತಿಳಿದುಬಂದಿದೆ. ಹೇಗಿದ್ದರೂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲ್ಲ. ಇದರಿಂದ ಯೋಗೇಶ್ವರ್​ ಬಂಡಾಯ ಎದ್ದೇಳುವುದು ಖಚಿತ ಎನ್ನುವ ಸುಳಿವು ಡಿಕೆ ಬ್ರದರ್ಸ್​ಗೆ ಸಿಗುತ್ತಿದ್ದಂತೆಯೇ ಅವರನ್ನು ಕಾಂಗ್ರೆಸ್​ಗೆ ಕರೆತರಲು ಸೈಲೆಂಟ್​ ಆಗಿಯೇ ಪ್ಲಾನ್ ಮಾಡಿದ್ದರು. ಅದು ಇದೀಗ ಕೊನೆ ಕ್ಷಣದಲ್ಲಿ ಡಿಕೆ ಬ್ರದರ್ಸ್​ ಪ್ರಯೋಗಿಸಿದ್ದ ಅಸ್ತ್ರ ಯಶಸ್ವಿಯಾಗಿದೆ.

ಯೋಗೇಶ್ವರ್ ಕರೆತರುವ ಹೊಣೆ ಇಬ್ಬರು ಶಾಸಕರ ಹೆಗಲಿಗೆ ಬಿದ್ದಿತ್ತು

ಹೌದು…ಯಾವಾಗ ಬಿಜೆಪಿ ಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೋ ಅಂದಿನಿಂದ ಸಿಪಿ ಯೋಗೇಶ್ವರ್​​ ಅವರನ್ನು ಸೆಳೆಯಲು ಕಾಂಗ್ರೆಸ್​ ಕಸರತ್ತು ನಡೆಸಿತ್ತು. ಯೋಗೇಶ್ವರ್​ ಅವರನ್ಜ ಕಾಂಗ್ರೆಸ್​ಗೆ ಕರೆತರುವ ಜವಾಬ್ದಾರಿಯನ್ನು ಕದಲೂರು ಉದಯ್ ಗೌಡ, ಮತ್ತು ಮಾಗಡಿ ಶಾಸಕ ಬಾಲಕೃಷ್ಣ ಹೆಗಲಿಗೆ ಹಾಕಲಾಗಿತ್ತು. ಡಿಕೆ ಶಿವಕುಮಾರ್​ ನೀಡಿದ್ದ ಟಾಸ್ಕ್​ನಿಂದ ಈ ಇಬ್ಬರು ನಾಯಕರು ಯೋಗೇಶ್ವರ್ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದು ಮಾತುಕತೆ ನಡೆಸಿದ್ದರು. ಯೋಗೇಶ್ವರ್ ಗ್ರೀನ್ ಸಿಗ್ನಲ್ ನೀಡಿದ್ದರೆ ನಿನ್ನೆ (ಅಕ್ಟೋಬರ್ 22) ಕಾಂಗ್ರೆಸ್ ಸೇರ್ಪಡೆ ಆಗಬೇಕಿತ್ತು. ಆದ್ರೆ, ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡದಿದ್ದರಿಂದ ಬಿಜೆಪಿ ಟಿಕೆಟ್​ ಸಿಗಬಹುದು ಎಂದು ಯೋಗೇಶ್ವರ್ ಕಾದು ಕುಳಿತ್ತಿದ್ದರು.

ಆದ್ರೆ, ಬಿಜೆಪಿ ಟಿಕೆಟ್​ ಘೋಷಣೆ ಮಾಡದಿದ್ದರಿಂದ ಸಿಪಿ ಯೋಗೇಶ್ವರ್​ ನಿನ್ನೆ ರಾತ್ರಿಯೇ ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದು, ಇಂದು (ಅಕ್ಟೋಬರ್ 23) ನೇರವಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಳಿಕ ಸಿದ್ದರಾಮಯ್ಯನವರನ್ನು ಕಂಡು ಮಾತು ಕತೆ ನಡೆಸಿ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.

ಇದರೊಂದಿಗೆ ಚನ್ನಪಟ್ಟಣ ಉಪಚುನಾವಣೆ ಕದನ ಮತ್ತಷ್ಟು ರಂಗೇರಿದ್ದು, ಈಗ ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲ ಮೂಡಿಸಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments