ಬೆಂಗಳೂರು: ಮಳೆಗಾಲ ಮುಗಿದ್ರೂ ಮಳೆ ಮಾತ್ರ ನಿಂತಿಲ್ಲ. ಚಳಿಗಾಲದಲ್ಲೂ ಮಳೆ ಅವಾಂತರ ಮುಂದುವರಿಸಿದೆ.
ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು,ಮುಂದಿನ 10 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ರಾಜ್ಯದ ಮೇಲೂ ಇದರ ಪರಿಣಾಮ ಇದೆ. ಆದ್ದರಿಂದ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. ಹೀಗಾಗಿ ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದೆ. ಬೆಂಗಳೂರಿನಲ್ಲಿ ರಾತ್ರಿಯಿಡೀ ಜಿಟಿ ಜಿಟಿ ಮಳೆಯಾಗಿದ್ದು, ರಾಜ್ಯದಲ್ಲಿ 10 ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕೆಲ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ನೀಡಿದೆ.
ಬೆಂಗಳೂರಿನಲ್ಲಿ ರಾತ್ರಿಯಿಡೀ ಜಿಟಿ-ಜಿಟಿ ಮಳೆಯಾಗಿದೆ. ಬೆಳ್ಳಂ ಬೆಳಗ್ಗೆ ಕೂಡ ಮಳೆ ಮುಂದುವರೆದಿತ್ತು. ನಗರದ ಹಲವು ಕಡೆಗಳಲ್ಲಿ ಮಳೆಯಾದ ಹಿನ್ನೆಲೆ ಹಬ್ಬದ ದಿನ ವ್ಯಾಪಾರಸ್ಥರಿಗೆ ಕಿರಿಕಿರಿಯಾಗಿದೆ. ಇಂದು ಕೂಡ ಶೀತ ಗಾಳಿ ಜೊತೆಗೆ ಜಿಟಿ ಜಿಟಿ ಮಳೆ ಮುಂದುವರೆದಿದೆ. ಮಳೆಯಿಂದ ವಾಹನ ಸವಾರರು ಪರದಾಡುವಂತೆ ಆಗಿದೆ. ರಾಜ್ಯದಲ್ಲಿ ಮಳೆ ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಇದ್ದು, ಮುಂದಿನ 10 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


