ಚೆನ್ನೈ: ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದ ಅಬ್ಬರಿಸಿದ್ದು, ನವೆಂಬರ್ 30 ರವೇಳೆಗೆ ಉತ್ತರ ತಮಿಳುನಾಡು, ಪುದುಚೇರಿ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ..
ಇಂದಿನಿಂದ ಡಿಸೆಂಬರ್ 1ರವರೆಗೆ ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ರಾಯಲಸೀಮಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 30ರಂದು ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಕರಾವಳಿ ರಾಯಲಸೀಮಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಪುದುಚೇರಿ, ತಮಿಳುನಾಡಿನ ಕಡಲೂರು, ಮೈಲಾಡುತುರೈ, ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡಿನ ಪುದುಕ್ಕೊಟ್ಟೈ, ತಂಜಾವೂರು, ತಿರುವರೂರು, ನಾಗಪಟ್ಟಣಂ, ಅರಿಯಲೂರು, ಪೆರಂಬಲೂರು, ತಿರುಚಿರಾಪಳ್ಳಿ, ಸೇಲಂ, ಕಲ್ಲಕುರಿಚಿ, ತಿರುವಣ್ಣಾಮಲೈ, ಚೆನ್ನೈ, ಕಾಂಚೀಪುರಂ, ತಿರುವಲ್ಲೂರು ಮತ್ತು ರಾಣಿಪೇಟೆ – ಕಾರೈಕಲ್ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.
ಕೇರಳದಲ್ಲಿ ಇಂದು ಭಾರಿ ಮಳೆಯಾಗುವ ನಿರೀಕ್ಷೆಯಿದ್ದರೆ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮತ್ತು ಮಿಂಚಿನೊಂದಿಗೆ ತೀವ್ರ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ. ಚಂಡಮಾರುತದಿಂದ ಉಂಟಾದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯ ಮೇಲೆ ಕೂಡ ಪರಿಣಾಮ ಬೀರಿವೆ. ಇದರಿಂದಾಗಿ ಇಂದು ನಿಗದಿಯಾಗಿದ್ದ ಕನಿಷ್ಠ 54 ವಿಮಾನಗಳನ್ನು ರದ್ದುಗೊಳಿಸಲಾಗಿದೆ.


