Martin Kannada movie: ನಿರ್ದೇಶಕ ಎಪಿ ಅರ್ಜುನ್, ತಾವೇ ನಿರ್ದೇಶನ ಮಾಡಿರುವ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸಿನಿಮಾದ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಪ್ರಾರಂಭವಾಗಿ ಸುಮಾರು ಐದಾರು ವರ್ಷವಾಗಿದೆ. ವರ್ಷಗಳ ಬಳಿಕ ಈಗ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಇನ್ನೇನು ಸುಸೂತ್ರವಾಗಿ ಸಿನಿಮಾ ಬಿಡುಗಡೆ ಆಗಲಿದೆ ಎಂದುಕೊಳ್ಳುತ್ತಿರುವಾಗಲೇ ಸಿನಿಮಾ ವಿವಾದಕ್ಕೆ ಸಿಲುಕಿದೆ. ಇದೀಗ ‘ಮಾರ್ಟಿನ್’ ಸಿನಿಮಾ ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಅವರೇ ಸಿನಿಮಾ ಕುರಿತಾಗಿ ಹೈಕೋರ್ಟ್​ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಎಪಿ ಅರ್ಜುನ್ ನಡುವೆ ಕಳೆದ ಒಂದೆರಡು ವರ್ಷಗಳಿಂದಲೂ ಕೋಲ್ಡ್ ವಾರ್ ಚಾಲ್ತಿಯಲ್ಲಿದೆ. ಸಿನಿಮಾದ ಬಜೆಟ್, ಹಣ ದುರ್ಬಳಕೆ ಆರೋಪವನ್ನು ನಿರ್ಮಾಪಕ ಉದಯ್ ಮೆಹ್ತಾ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿನಿಮಾದ ವಿಎಫ್​ಎಕ್ಸ್​ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣವನ್ನು ಉದಯ್ ಮೆಹ್ತಾ ಈಗಾಗಲೇ ದಾಖಲಿಸಿದ್ದಾರೆ. ಉದಯ್ ಮೆಹ್ತಾ ನೀಡಿದ್ದ ದೂರಿನಲ್ಲಿ ಎಪಿ ಅರ್ಜುನ್ ಹೆಸರು ಸಹ ಇತ್ತು.

ವಿವಾದದ ಬಳಿಕ ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮಗಳಲ್ಲಿ ಕಂಡು ಬಂದ ಸಿನಿಮಾ ಪೋಸ್ಟರ್​ಗಳಲ್ಲಿ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಅವರ ಹೆಸರು ನಾಪತ್ತೆಯಾಗಿತ್ತು. ನಿರ್ದೇಶಕರ ಹೆಸರು ಬಿಟ್ಟು ಸಿನಿಮಾದ ಪ್ರಚಾರವನ್ನು ನಿರ್ಮಾಪಕ ಉದಯ್ ಮೆಹ್ತಾ ಮಾಡಿದ್ದರು. ಇದೀಗ ಕೋರ್ಟ್ ಮೆಟ್ಟಿಲೇರಿರುವ ಎಪಿ ಅರ್ಜುನ್, ‘ಸಿನಿಮಾದ ನಿರ್ದೇಶಕನಾಗಿದ್ದರೂ ಸಹ ನನ್ನ ಹೆಸರು ಕೈಬಿಟ್ಟು ಪ್ರಚಾರ ಮಾಡಲಾಗುತ್ತಿದೆ. ಸಿನಿಮಾದ ಒಪ್ಪಂದವನ್ನು ನಿರ್ಮಾಪಕರು ಪಾಲಿಸುತ್ತಿಲ್ಲ. ನನ್ನ ಹೆಸರು ಇಲ್ಲದೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು’ ಎಂದು ಅರ್ಜುನ್, ಕೋರ್ಟ್​ಗೆ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ.

‘ಮಾರ್ಟಿನ್’ ಸಿನಿಮಾದ ಸಿಜಿ ಹಾಗೂ ವಿಎಫ್​ಎಕ್ಸ್​ ಕೆಲಸಗಳನ್ನು ಮಾಡಿಕೊಡಲು ಡಿಜಿಟಲ್ ಟೆರೆನ್ ಎಂಬ ಸಂಸ್ಥೆಯೊಂದಿಗೆ ನಿರ್ಮಾಪಕ ಉದಯ್ ಮೆಹ್ತಾ ಒಪ್ಪಂದ ಮಾಡಿಕೊಂಡಿದ್ದರು. ನಿರ್ದೇಶಕ ಅರ್ಜುನ್ ಶಿಫಾರಸ್ಸಿನಂತೆ ಈ ಸಂಸ್ಥೆಗೆ ಕೆಲಸ ವಹಿಸಲಾಗಿತ್ತು. ಇದಕ್ಕಾಗಿ ನಿರ್ಮಾಪಕರು 2.5 ಕೋಟಿ ರೂಪಾಯಿ ಹಣ ನೀಡಿದ್ದರು. ಆದರೆ ಈ ಸಂಸ್ಥೆ ವಿಎಫ್​ಎಕ್ಸ್ ಮತ್ತು ಸಿಜಿ ಕಾರ್ಯವನ್ನು ಮಾಡಿಕೊಟ್ಟಿರಲಿಲ್ಲ. ಮಾಡಿದ ಕೆಲಸವೂ ತೃಪ್ತಿದಾಯಕವಾಗಿರಲಿಲ್ಲ ಎಂದು ನಿರ್ಮಾಪಕರು ಆರೋಪ ಮಾಡಿದ್ದರು. ಬಳಿಕ ಸಂಸ್ಥೆಯ ಸುರೇಂಧ್ರ ರೆಡ್ಡಿ ಮತ್ತು ಸತ್ಯಾ ರೆಡ್ಡಿ ವಿರುದ್ಧ ಉದಯ್ ಮೆಹ್ತಾ ದೂರು ದಾಖಲಿಸಿದ್ದರು. ಆ ಬಳಿಕ ಹೇಳಿಕೆ ನೀಡಿದ್ದ ಡಿಜಿಟಲ್ ಟೆರೇನ್ ಸಂಸ್ಥೆಯ ಸುರೇಂಧ್ರ ರೆಡ್ಡಿ, ನಿರ್ಮಾಪಕ ಉದಯ್ ಮೆಹ್ತಾ ನೀಡಿರುವ 2.50 ಕೋಟಿ ಹಣದಲ್ಲಿ ಎಪಿ ಅರ್ಜುನ್ 50 ಲಕ್ಷ ರೂಪಾಯಿ ಕಮೀಷನ್ ಪಡೆದಿದ್ದಾರೆ ಎಂದಿದ್ದರು. ಇದು ಉದಯ್ ಮೆಹ್ತಾ ಹಾಗೂ ಎಪಿ ಅರ್ಜುನ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಎಪಿ ಅರ್ಜುನ್ ಹೆಸರು ಕೈಬಿಟ್ಟು ಪ್ರಚಾರ ಮಾಡಲು ಉದಯ್ ಮೆಹ್ತಾ ಮುಂದಾಗಿದ್ದರು. ಇದರಿಂದ ಬೇಸರಗೊಂಡು ಎಪಿ ಅರ್ಜುನ್ ಕೋರ್ಟ್ ಮೆಟ್ಟಿಲು ಏರಿದ್ದಾರೆ.

Leave a Reply

Your email address will not be published. Required fields are marked *

Verified by MonsterInsights