ನಾನೇನು ಜ್ಯೋತಿಷಿಯಲ್ಲ..! ದಿನೇಶ್ ಗುಂಡೂರಾವ್ ಟಾಂಗ್ ಕೊಟ್ಟಿದ್ದು ಯಾರಿಗೆ ?

ನಮ್ಮ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಸಚಿವ ದಿನೇಶ್ ಗುಂಡೂರಾವ್ ಕಲಬುರಗಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೆಟ್ರೋ ದರ ಏರಿಸುವ ಅಧಿಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ ಎಂಬ ಸತ್ಯ ಗೊತ್ತಿದ್ದರೂ, ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ . ಟಿಕೆಟ್ ದರ ಪರಿಷ್ಕರಣೆಗಾಗಿ ದರ ಪರಿಷ್ಕರಣಾ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ತೇಜಸ್ವಿ ಸೂರ್ಯ ಅವರು ಅನಗತ್ಯ ಆರೋಪ ಮಾಡುವ ಬದಲು ಕೇಂದ್ರದ ಮೇಲೆ ಒತ್ತಡ ತರಲಿ ಎಂದು ಸವಾಲು ಹಾಕಿದರು.
ಇವಿಎಂ ವಿಚಾರದಲ್ಲೂ ಬಿಜೆಪಿಯ ನಿಲುವನ್ನು ಟೀಕಿಸಿದ ದಿನೇಶ್ ಗುಂಡೂರಾವ್, ವಿಶ್ವದ ಮುಂದುವರಿದ ರಾಷ್ಟ್ರಗಳೇ ಇವಿಎಂ ಬದಿಗಿಟ್ಟು ಬ್ಯಾಲೆಟ್ ಪೇಪರ್ ಬಳಸುತ್ತಿವೆ , ದೇಶದಲ್ಲಿ ಇವಿಎಂ ಬಗ್ಗೆ ಸಾರ್ವಜನಿಕರಲ್ಲಿ ಹಲವು ಸಂಶಯಗಳಿದ್ದು, ಚುನಾವಣಾ ಆಯೋಗವು ಈ ಗೊಂದಲಗಳನ್ನು ಪರಿಹರಿಸಿಲ್ಲ. ಆದ್ದರಿಂದ ಪಾರದರ್ಶಕತೆ ಕಾಪಾಡಲು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆ ಮತ್ತು ಡಿ.ಕೆ. ಶಿವಕುಮಾರ್ ಅವರ ಸಿಎಂ ಯೋಗದ ಬಗ್ಗೆ ಕೇಳಲಾದ ಪ್ರಶ್ನೆಗೆ, “ಯಾರಿಗೆ ಏನು ಯೋಗ ಇದೆ ಎಂದು ಹೇಳಲು ನಾನೇನು ಜ್ಯೋತಿಷಿಯಲ್ಲ” ಎಂದು ಚಟಾಕಿ ಹಾರಿಸಿದರು .




