ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ‘ಧುರಂಧರ್’ ಸಿನಿಮಾದ ಕಲಾವಿದ ನದೀಮ್ ಖಾನ್ ಅವರನ್ನು ಲೈಂಗಿಕ ಕಿರುಕುಳ ಹಾಗೂ ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಸಿನಿಮಾದಲ್ಲಿ ಡಕಾಯಿತ್ ರೆಹಮಾನ್ ಮನೆಯ ಬಾಣಸಿಗ ‘ಅಖ್ಲಾಕ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನದೀಮ್ ಖಾನ್, ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ಪೊಲೀಸರು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
41 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ದೂರಿನಲ್ಲಿ ಉಲ್ಲೇಖ ಆಗಿರುವ ಪ್ರಕಾರ, 2015ರಲ್ಲಿ ಸಂತ್ರಸ್ತೆ ನದೀಮ್ ಖಾನ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ನದೀಮ್ ಖಾನ್ ಕಳೆದ 10 ವರ್ಷಗಳಿಂದ ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಹಲವು ವರ್ಷಗಳಿಂದ ದೈಹಿಕ ಸಂಬಂಧ ಮುಂದುವರಿಸಿದ್ದ ನಟ, ಈಗ ಮದುವೆ ಪ್ರಸ್ತಾಪ ಬಂದಾಗ ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪೊಲೀಸರು ಈಗಾಗಲೇ ನದೀಮ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಸಾಕ್ಷ್ಯಗಳ ಸಂಗ್ರಹ ಹಾಗೂ ಹೆಚ್ಚುವರಿ ಹೇಳಿಕೆಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ಇನ್ನು ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಜಾಗತಿಕವಾಗಿ 1,300 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಇಂತಹ ಬ್ಲಾಕ್ ಬಸ್ಟರ್ ಸಿನಿಮಾದ ಭಾಗವಾಗಿದ್ದ ನಟನ ಈ ಕೃತ್ಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.


