ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ರಾಮಚಂದ್ರ ರಾವ್ ಅವರ ಖಾಸಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಡೀ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಕಚೇರಿಯಲ್ಲೇ ಕುಳಿತು ಮಹಿಳೆಯೊಬ್ಬರ ಜೊತೆ ಅವರು ನಡೆಸಿದ ಸರಸದ ದೃಶ್ಯಗಳು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರು ಪೊಲೀಸ್ ಸಮವಸ್ತ್ರದಲ್ಲೇ ಕಚೇರಿಯ ಚೇರ್ ಮೇಲೆ ಕುಳಿತು ಮಹಿಳೆಯೊಬ್ಬರನ್ನು ಅಪ್ಪಿಕೊಂಡಿರುವ ದೃಶ್ಯಗಳಿವೆ. ಸುಮಾರು ಒಂದು ವರ್ಷದ ಹಿಂದೆ ಸೆರೆಯಾಗಿದೆ ಎನ್ನಲಾದ ಈ ಹಸಿಬಿಸಿ ದೃಶ್ಯಗಳು ಈಗ ಹೊರಬಂದಿದ್ದು, ಅಧಿಕಾರಿಯ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಸದ್ಯ ಇವರು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (DCRE) ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 4-5 ತಿಂಗಳಲ್ಲಿ ರಾಮಚಂದ್ರ ರಾವ್ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಲಿದ್ದರು. ನಿವೃತ್ತರಾಗುವ ಸಮಯದಲ್ಲೇ ಅವರು ರಹಸ್ಯ ಕ್ಯಾಮೆರಾದ ಮುಂದೆ ಬೆತ್ತಲಾಗಿದ್ದಾರೆ.
ಮಗಳ ಅಕ್ರಮದ ಬೆನ್ನಲ್ಲೇ ತಂದೆಯ ‘ಲೀಲೆ’ ಬಯಲು!
ರಾಮಚಂದ್ರ ರಾವ್ ಅವರ ಮಗಳು, ನಟಿ ರನ್ಯಾ ರಾವ್ ಇತ್ತೀಚೆಗಷ್ಟೇ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ರನ್ಯಾಗೆ ಪೊಲೀಸ್ ಪ್ರೋಟೋಕಾಲ್ ನೀಡುವಲ್ಲಿ ರಾಮಚಂದ್ರ ರಾವ್ ಅವರ ಹಸ್ತಕ್ಷೇಪದ ಬಗ್ಗೆ ಗೃಹ ಇಲಾಖೆ ತನಿಖೆಗೆ ಆದೇಶಿಸಿತ್ತು. ಈ ವಿವಾದದ ಬೆನ್ನಲ್ಲೇ ಈಗ ಡಿಜಿಪಿ ಅವರ ರಾಸಲೀಲೆ ವಿಡಿಯೋ ಹೊರಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರದ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, “ಕಚೇರಿಯಲ್ಲೇ ಮಹಿಳೆಯರ ಜೊತೆ ಇಂತಹ ಅನುಚಿತ ವರ್ತನೆ ತೋರುವುದು ಗೃಹ ಇಲಾಖೆಗೆ ಆದ ದೊಡ್ಡ ಅಪಮಾನ. ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.


