ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತನೋರ್ವ ಚಿರತೆ ದಾಳಿಗೆ ಬಲಿಯಾಗಿರುವ ಘೋರ ಘಟನೆ ಹನೂರು ತಾಲೂಕಿನ ತಾಳಬೆಟ್ಟದ ಬಳಿ ನಡೆದಿದೆ. ಈ ಘಟನೆಯಿಂದಾಗಿ ಮಲೆ ಮಾದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆತಂಕದ ಛಾಯೆ ಆವರಿಸಿದೆ.
ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ (24) ಮೃತ ದುರ್ದೈವಿ. ಐವರು ಸ್ನೇಹಿತರ ತಂಡದೊಂದಿಗೆ ಮಾದೇಶ್ವರನ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದ ಪ್ರವೀಣ್, ತಾಳಬೆಟ್ಟದ ಬಳಿ ಪೂಜೆ ಸಲ್ಲಿಸಿ ಕಾಡಿನ ದಾರಿಯಲ್ಲಿ ಸಾಗುತ್ತಿದ್ದರು. ಈ ವೇಳೆ ರಸ್ತೆ ಪಕ್ಕದ ತಡೆಗೋಡೆಯ ಮೇಲೆ ಕುಳಿತಿದ್ದ ಚಿರತೆ ಇದ್ದಕ್ಕಿದ್ದಂತೆ ಇವರ ಮೇಲೆರಗಿದೆ. ಗಾಬರಿಗೊಂಡ ಸ್ನೇಹಿತರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಗೊಂದಲದಲ್ಲಿ ಪ್ರವೀಣ್ ನಾಪತ್ತೆಯಾಗಿದ್ದನು.
ಬೆಳಿಗ್ಗೆ ಅರಣ್ಯ ಇಲಾಖೆ ಮತ್ತು ಪೊಲೀಸರು ಹುಡುಕಾಟ ನಡೆಸಿದಾಗ, ರಸ್ತೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದ ಕಂದಕದಲ್ಲಿ ಪ್ರವೀಣ್ ಶವ ಪತ್ತೆಯಾಗಿದೆ. ಪ್ರವೀಣ್ ದೇಹದ ರಕ್ತ ಹೀರಿ ಕೊಲೆ ಮಾಡಿದ್ದ ನರಭಕ್ಷಕ ಚಿರತೆ, ಶವದ ಪಕ್ಕದಲ್ಲೇ ಠಿಕಾಣಿ ಹೂಡಿ ಕುಳಿತಿತ್ತು. ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಚಿರತೆಯನ್ನು ಓಡಿಸಿ ಬಳಿಕ ಶವವನ್ನು ಹೊರತೆಗೆದಿದ್ದಾರೆ.
ಈ ನರಭಕ್ಷಕ ಚಿರತೆಯ ದಾಳಿಯಿಂದಾಗಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಂದಿನಿಂದ (ಜ. 21) ಮುಂದಿನ ನಾಲ್ಕು ದಿನಗಳ ಕಾಲ ಪಾದಯಾತ್ರೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಚಿರತೆಯನ್ನು ಸೆರೆಹಿಡಿಯುವವರೆಗೂ ಭಕ್ತರು ಕಾಲು ಹಾದಿಯಲ್ಲಿ ಸಂಚರಿಸದಂತೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇನ್ನು ತಾಳಬೆಟ್ಟದ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. “ನಾವು ಅರಣ್ಯ ಇಲಾಖೆಯ ಸೂಚನೆಯಂತೆ ಬೆಳಗಿನ ಜಾವವೇ ಪಯಣ ಬೆಳೆಸಿದ್ದೆವು, ಆದರೂ ಈ ದುರಂತ ಸಂಭವಿಸಿದೆ” ಎಂದು ಪ್ರತ್ಯಕ್ಷದರ್ಶಿಗಳು ಅಳಲು ತೋಡಿಕೊಂಡಿದ್ದಾರೆ.


